ಧೈರ್ಯ, ಸೇವೆ ಮತ್ತು ಆತ್ಮಶಕ್ತಿಯ ಪ್ರತೀಕ ವಿವೇಕಾನಂದರು: ಡಾ. ಧನಂಜಯ ಕುಂಬ್ಳೆ
Friday, May 15, 2026
ಮಂಗಳೂರು: ‘ಕಾವ್ಯ ಕನ್ನಡಿಯಲ್ಲಿ ಕಂಡ ವಿವೇಕಾನಂದರು’ ಎಂಬ ವಿಷಯವು ಸ್ವಾಮಿ ವಿವೇಕಾನಂದರ ಮಹಾನ್ ವ್ಯಕ್ತಿತ್ವವನ್ನು ಭಾವನಾತ್ಮಕ ಹಾಗೂ ಆದರ್ಶಮಯ ದೃಷ್ಟಿಯಿಂದ ಪರಿಚಯಿಸುತ್ತದೆ. ವಿವೇಕಾನಂದರು ಕೇವಲ ಸಂನ್ಯಾಸಿಯಲ್ಲ, ಅವರು ಜಾಗೃತ ಭಾರತದ ಚೇತನ, ಯುವಶಕ್ತಿಯ ಪ್ರತೀಕ ಹಾಗೂ ಆತ್ಮವಿಶ್ವಾಸದ ಜ್ಯೋತಿಯಾಗಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.
ಅವರು ಇಂದು ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೈದನೇ ಉಪನ್ಯಾಸದಲ್ಲಿ ‘ಕಾವ್ಯ ಕನ್ನಡಿಯಲ್ಲಿ ಕಂಡ ವಿವೇಕಾನಂದರು’ ಎಂಬ ವಿಷಯದ ಕುರಿತು ಮಂಗಳೂರಿನ ಉರ್ವದಲ್ಲಿರುವ ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತನಾಡಿದರು.
ವಿವೇಕನಂದರ ಮಾತುಗಳು ಮತ್ತು ಚಿಂತನೆಗಳು ಅನೇಕ ಹೃದಯಗಳಲ್ಲಿ ಸ್ಪೂರ್ತಿಯ ಅಲೆಗಳನ್ನು ಮೂಡಿಸಿ, ಮಾನವನೊಳಗೆ ಅಡಗಿರುವ ಶಕ್ತಿಯನ್ನು ಹೊರತೆಗೆದವು. ವಿವೇಕಾನಂದರ ಜೀವನವು ತ್ಯಾಗ, ಸೇವೆ, ದೇಶಭಕ್ತಿ ಮತ್ತು ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿದೆ. ಕಾವ್ಯದಲ್ಲಿ ಅವರು ಶಕ್ತಿಯ ರೂಪವಾಗಿ, ಧೈರ್ಯದ ಸಂಕೇತವಾಗಿ ಹಾಗೂ ಮಾನವ ಸೇವೆಯನ್ನು ಶಿವ ಸೇವೆಯೆಂದು ಸಾರಿದ ಮಹಾನ್ ಚಿಂತಕರಾಗಿ ಮೂಡಿಬರುತ್ತಾರೆ. ಯುವಜನತೆ ಆತ್ಮವಿಶ್ವಾಸದಿಂದ ಎದ್ದು ನಿಂತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂಬ ಅವರ ಸಂದೇಶ ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದರು.
ಸ್ವಾಮಿ ವಿವೇಕಾನಂದರು ಭಾರತ ದೇಶದ ಆತ್ಮವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಯುಗಪುರುಷರು. ಅವರ ಚಿಂತನೆಗಳು ಕೇವಲ ಆಧ್ಯಾತ್ಮಿಕತೆಯಲ್ಲ, ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ದಾರಿದೀಪವಾಗಿವೆ. ಕಾವ್ಯದ ಕನ್ನಡಿಯಲ್ಲಿ ಕಾಣುವ ವಿವೇಕಾನಂದರು ನಮಗೆ ಧೈರ್ಯ, ಸೇವಾಭಾವ, ಮಾನವೀಯತೆ ಮತ್ತು ಉನ್ನತ ಆದರ್ಶಗಳ ಜೀವನದ ಮಹತ್ವವನ್ನು ನೆನಪಿಸುತ್ತಾರೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾರ್ದಿಕ್ ಪಿ. ಚೌಹಾನ್ ವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಅಶ್ವಿನಿ ಎಸ್., ವಿದ್ಯಾರ್ಥಿ ಕಲ್ಯಾಣ ಸಮಿತಿಯ ಉಪಾಧ್ಯಕ್ಷೆ ಮತ್ತು ಉಪನ್ಯಾಸಕಿ ಜಾಯ್ಲಿನ್ ಆರ್. ಪಿಂಟೋ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್.ಸಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥೆ ಸುಚಿತ್ರಾ ಪಿ. ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ತಿಲಕ್ ಗೌಡ ಮಂಗಳೂರು ವಂದಿಸಿ, ವಿದ್ಯಾರ್ಥಿನಿ ಮೇಘಾ ಕಾರ್ಯಕ್ರಮವನ್ನು ನಿರೂಪಿಸಿದರು.


