ಮೂಡುಬಿದಿರೆಯಲ್ಲಿ ಮೇ 17ರಂದು ಜಿಲ್ಲಾ ಮಟ್ಟದ ಗಾಣಿಗರ ವಾಲಿಬಾಲ್, ತ್ರೋಬಾಲ್, ಶಟ್ಲ್ ಪಂದ್ಯಾಟ
ಮೂಡುಬಿದಿರೆ: ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವ ವೇದಿಕೆ ಮತ್ತು ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ವತಿಯಿಂದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್, ಶಟ್ಲ್ ಪಂದ್ಯಾಟ ಹಾಗೂ ಸ್ವಜಾತಿ ಮಹಿಳೆಯರಿಗಾಗಿ ವಿಲಾಸಿನಿ ಮುರಳೀದಾಸ್ ಕಾವೂರು ಸ್ಮರಣಾರ್ಥ 7 ಆಟಗಾರ್ತಿಯರ ತ್ರೋಬಾಲ್ ಪಂದ್ಯಾಟವು ಮೇ 17ರಂದು ಮೂಡುಬಿದಿರೆಯ ಶ್ರೀ ಧವಳಾ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10.36ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಮಾರುತಿ ಟೈರ್ ರಿಸೋಲಿಂಗ್ ಮಾಲೀಕ ಶಂಕರ ಎ. ಕೋಟ್ಯಾನ್ ನೆರವೇರಿಸಲಿದ್ದಾರೆ. ಗಾಣಿಗ ಯಾನೆ ಸಪಳಿಗರ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸ್ತವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸೇಸಪ್ಪ ಸಾಲ್ಯಾನ್, ರವಿ ಪೂಜಾರಿ, ಅಶೋಕ್ ಸಪಳಿಗ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಸಂಘದ ಗೌರವಾಧ್ಯಕ್ಷ ಡಾ ಸತ್ಯಶಂಕರ್ ಪುತ್ರನ್ ಮತ್ತು ಪ್ರಾಯೋಜಕ ಮುರಳೀದಾಸ್ ಕಾವೂರು ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಈಜುಪಟು ಶ್ರೀಲಕ್ಷ್ಮಿ ಗಾಣಿಗ ವಿಟ್ಲ ಅವರನ್ನು ಸನ್ಮಾನಿಸಲಾಗುವುದು.
ಪಂದ್ಯಾಟದಲ್ಲಿ ವಿಜೇತರಾದ ಪುರುಷರ ವಾಲಿಬಾಲ್ ತಂಡಕ್ಕೆ ಗಾಣಿಗ ಟ್ರೋಫಿ ಹಾಗೂ ಪ್ರಥಮ ಬಹುಮಾನವಾಗಿ 5,555 ರೂ., ದ್ವಿತೀಯ ಬಹುಮಾನವಾಗಿ 4,444 ರೂ. ನಗದು ನೀಡಲಾಗುವುದು. ಮಹಿಳೆಯರ ತ್ರೋಬಾಲ್ ಪಂದ್ಯಾಟದ ವಿಜೇತರಿಗೆ ವಿಲಾಸಿನಿ ಮುರಳೀದಾಸ್ ಗಾಣಿಗ ಟ್ರೋಫಿ ಹಾಗೂ ಪ್ರಥಮ 4,444 ರೂ. ಮತ್ತು ದ್ವಿತೀಯ 3,333 ರೂ. ನಗದು ಪುರಸ್ಕಾರ ದೊರೆಯಲಿದೆ. ಶಟ್ಲ್ ಪಂದ್ಯಾಟದಲ್ಲಿ 15 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಹಾಗೂ 30 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ನಗದು ಮತ್ತು ಟ್ರೋಫಿ ನೀಡಲಾಗುವುದು. ಭಾಗವಹಿಸುವ ಎಲ್ಲಾ ತಂಡಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.
ಕ್ರೀಡಾಕೂಟದ ಸಂಘಟನೆಯಲ್ಲಿ ಪ್ರತಾಪ್ ಬೆಟ್ಟೇರಿ, ನತೇಶ್ ಬಾರಾಡಿ, ಸುಕೇಶ್ ಬಾರಾಡಿ, ನವೀನ್ ಪುತ್ರನ್, ಸತೀಶ್ ಬಾರಾಡಿ, ಸುಜಯ ಬಂಗೇರ, ಸಾರಿಕಾ ಬಂಗೇರ, ಸುಶ್ಮಿತಾ ರಂಜಿತ್ ಹಾಗೂ ಸರ್ವ ಸದಸ್ಯರು ಸಹಕರಿಸಲಿದ್ದಾರೆ. ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರರು ತಮ್ಮ ವಲಯದ ಸಂಘದಿಂದ ದೃಢೀಕರಣ ಪತ್ರ ತರುವುದು ಕಡ್ಡಾಯವಾಗಿದ್ದು, ಮೇ 15ರ ಒಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.