ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳಿಂದ ಚಾರಣ ಹಾಗೂ ಪರಿಸರ ಅಧ್ಯಯನ ಶಿಬಿರ
Sunday, May 10, 2026
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವತಿಯಿಂದ ವಿದ್ಯಾರ್ಥಿಗಳಿಗೆ ಮೇ.9 ರಂದು ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆದಮೆ ಫಾಲ್ಸ್, ದಿಡುಪೆಯಲ್ಲಿ ಚಾರಣ ಹಾಗೂ ಪರಿಸರ ಅಧ್ಯಯನ ಶಿಬಿರವನ್ನು ಯಶಸ್ವಿಯಾಗಿ ನಡೆಯಿತು.
ಈ ಶಿಬಿರದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಪ್ರಕೃತಿ ಪ್ರೀತಿ, ಪರಿಸರ ಸಂರಕ್ಷಣೆ ಹಾಗೂ ಸಾಹಸ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವುದಾಗಿತ್ತು. ವಿದ್ಯಾರ್ಥಿಗಳು ಚಾರಣದ ಮೂಲಕ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಿ, ಪರಿಸರ ಸಂರಕ್ಷಣೆ, ಜೀವ ವೈವಿಧ್ಯತೆ ಮತ್ತು ಅರಣ್ಯದ ಮಹತ್ವದ ಕುರಿತು ಮಾಹಿತಿ ಪಡೆದರು.
28 ರೇಂಜರ್ಸ್ ಹಾಗೂ 13 ರೋವರ್ಸ್ ಸೇರಿ ಒಟ್ಟು 41 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿ ತಾಲೂಕಿನ ವಲಯ ಅರಣ್ಯ ಅಧಿಕಾರಿಗಳಾದ RFO ಶರ್ಮಿಷ್ಟ, ಇವರ ಮಾರ್ಗದರ್ಶನದಲ್ಲಿ ಭರತೀಶ್ ಅರಣ್ಯ ಬೀಟ್ ಅಧಿಕಾರಿ ಅವರು ಪರಿಸರದ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟದ ವಿಶೇಷತೆ, ವನ್ಯಜೀವಿಗಳ ಪರಿಸರ ಕುರಿತು ಮಾಹಿತಿಯನ್ನು ನೀಡಿದರು. ಜೊತೆಗೆ ಅವುಗಳ ಸಂರಕ್ಷಣೆಯ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾಲೇಜಿನ ರೇಂಜರ್ ಲೀಡರ್ ಡಾ. ಅಪರ್ಣ ಅಳ್ವಾ ಹಾಗೂ ರೋವರ್ ಲೀಡರ್ ಮೊಹಮ್ಮದ್ ಇಕ್ಬಾಲ್ ಅವರು ಶಿಬಿರದ ನೇತೃತ್ವವನ್ನು ವಹಿಸಿದ್ದರು. ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಹ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಶಿಬಿರದಲ್ಲಿ ವಿವಿಧ ತಂಡ-ಆಟ, ನಾಯಕತ್ವ ಮತ್ತು ಶಿಸ್ತು ಬೆಳೆಸುವ ಚಟುವಟಿಕೆಗಳನ್ನು ನಡೆಸಲಾಯಿತು.

















