ಮೇ ದಿನಾಚರಣೆಯ ಅಂಗವಾಗಿ ಬಜಾಲ್‌ನಲ್ಲಿ ‘ಪ್ರಭಾತ್ ಫೇರಿ’
Friday, May 1, 2026
ಮಂಗಳೂರು: 8 ಗಂಟೆಯ ದುಡಿಮೆಗಾಗಿ ಜನ್ಮತಾಳಿದ ವಿಶ್ವ ಕಾರ್ಮಿಕರ ದಿನಾಚರಣೆಯ ವಿಶೇಷ ಆಕರ್ಷಣೆಯಾದ ಪ್ರಭಾತ್ ಫೇರಿಯನ್ನು ಬಜಾಲ್ ಪರಿಸರದಲ್ಲಿ ಯುವ ಕಾರ್ಮಿಕರು ಬೆಳ್ಳಂಬೆಳಗ್ಗೆ ಘೋಷಣೆಗಳನ್ನು ಕೂಗುವ ಮೂಲಕ ಮೇ ದಿನಾಚರಣೆಯ ಸಂದೇಶಗಳನ್ನು ಜನತೆಗೆ ತಿಳಿಸಲಾಯಿತು.
ಸೂರ್ಯೋದಯಕ್ಕೂ ಮುನ್ನ ನಡೆಸಲಾಗುವ ಈ ಪ್ರಭಾತ್ ಫೇರಿ ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ವ್ಯಾಪಕತೆಯನ್ನು ಪಡೆದಿತ್ತು. ಬಳಿಕ ಮೇ ದಿನಾಚರಣೆಯ ಭಾಗವಾಗಿ ಇದನ್ನು ನಿರಂತರವಾಗಿ ನಡೆಸಲಾಗಿತ್ತು.
ಸುಮಾರು 2 ಕಿ.ಮೀ.ನಷ್ಟು ಕ್ರಮಿಸಿದ ಪ್ರಭಾತ್ ಫೇರಿಯು ಅಂತಿಮವಾಗಿ ಪಕ್ಕಲಡ್ಕ ಜಂಕ್ಷನ್‌ನಲ್ಲಿ ಕೆಂಬಾವುಟವನ್ನು ಹಾರಿಸುವ ಮೂಲಕ ಮೇ ದಿನಾಚರಣೆಯನ್ನು ಆಚರಿಸಲಾಯಿತು.
ಬಜಾಲ್ ಪರಿಸರದ ಕಮ್ಯುನಿಸ್ಟ್ ಚಳುವಳಿಯ ಹಿರಿಯ ನಾಯಕ ಕೇಶವ ಭಂಡಾರಿ ಅವರು ಧ್ವಜಾರೋಹಣಗೈದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಮೇ ದಿನದ ಸಂದೇಶವನ್ನು ಸಾರಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ನಾಯಕ ಸಂತೋಷ್ ಬಜಾಲ್, ಸಿಐಟಿಯು ಜಿಲ್ಲಾ ನಾಯಕರಾದ ದೀಪಕ್ ಬಜಾಲ್, ಅಶೋಕ್ ಸಾಲ್ಯಾನ್, ಲೋಕೇಶ್ ಎಂ, ಜಯಪ್ರಕಾಶ್ ಜಲ್ಲಿಗುಡ್ಡ, ಸ್ಥಳೀಯ ಯುವನಾಯಕರಾದ ಯಶ್ ರಾಜ್, ದೀಕ್ಷಿತ್ ಭಂಡಾರಿ, ಅಶೋಕ್, ರಿತೇಶ್, ಪ್ರೀತೇಶ್, ಅನಿಲ್ ನಾಯಕ್, ಪ್ರಕಾಶ್ ಶೆಟ್ಟಿ, ವರಪ್ರಸಾದ್, ಉದಯ ಮತ್ತಿತರರು ಉಪಸ್ಥಿತರಿದ್ದರು.


