ದೊರೆಯದ ನೆರವು: ಮಾಜಿ ಸೈನಿಕರ ಅಸಮಾಧಾನ
ಮಂಗಳೂರು: ನಗರದ ಬಾವುಟಗುಡ್ಡೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಕಟ್ಟಡ ಆವರಣದ ತಡೆಗೋಡೆ ಕುಸಿದು ವರ್ಷವಾದರೂ ಜಿಲ್ಲಾಡಳಿತವಾಗಲಿ ಪಾಲಿಕೆಯಿಂದಾಗಲಿ ಯಾವುದೇ ನೆರವು ದೊರಕಿಲ್ಲ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಗ್ರೂಪ್ ಕ್ಯಾ.ಸುಧೀರ್ ಜಿ. ಅಮೀನ್, ಜಿಲ್ಲಾಡಳಿತದ ಸ್ಪಂದನೆ ಇಲ್ಲದ ಕಾರಣ ಇದೀಗ ಸಾರ್ವಜನಿಕರ ನೆರವು ಕೋರುವ ಸ್ಥಿತಿಗೆ ಬಂದಿದ್ದೇವೆ. ಸಾರ್ವಜನಿಕರು ನೆರವು ನೀಡುವ ಮೂಲಕ ತಡೆಗೋಡೆ ಮರು ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಕಳೆದ ವರ್ಷ ಮೇ 28ರಂದು ರಾತ್ರಿ ಸುರಿದ ಭಾರೀ ಮಳೆಗೆ ತಡೆಗೋಡೆ ಕುಸಿದು ಬಿದ್ದಿತ್ತು. ತಡೆಗೋಡೆ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಒದಗಿಸಿದ್ದ ಕಡಿದಾದ 5 ಸೆಂಟ್ಸ್ ಜಾಗದಲ್ಲಿ ಸಂಘದ ಕಟ್ಟಡ ನಿರ್ಮಿಸಲಾಗಿದೆ. 2023ರಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ತಡೆಗೋಡೆ ಜರಿದ ಪರಿಣಾಮ ಕಟ್ಟಡಕ್ಕೂ ಹಾನಿಯಾಗಿದ್ದು, ಈ ಬಗ್ಗೆ ಮನಪಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅವರು ಕಟ್ಟಡ ಉಪಯೋಗಿಸದಂತೆ ನೋಟಿಸ್ ನೀಡಿದ್ದಾರೆ ಹೊರತು ಕಾಮಗಾರಿಗೆ ಬೇಕಾದ ನೆರವು ನೀಡಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದೆ. ಅವರು ಸಭೆ ನಡೆಸಿ, ಮನಪಾ ಅಧಿಕಾರಿಗಳಿಗೆ ಹಲವು ಬಾರಿ ನಿರ್ದೇಶಿಸಿದ್ದರು. ಆದರೆ ಅಧಿಕಾರಿಗಳು ಅನುದಾನದ ಇಲ್ಲವೆಂದು ಸುಮ್ಮನಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಕಟ್ಟಡಕ್ಕೂ ಅಪಾಯವಿದೆ. ಅದರ ಮೊದಲು ಸರಪಡಿಸುವ ಕಾರ್ಯ ಆಗಬೇಕು ಎಂದು ಸುಧೀರ್ ಜಿ ಅಮೀನ್ ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಕ್ಯಾ.ದೀಪಕ್ ಅಡ್ಯಂತಾಯ, ಉಪಾಧ್ಯಕ್ಷ ಕ.ಜಯಚಂದ್ರನ್, ಕೋಶಾಧಿಕಾರಿ ನೌಕಾ ಸೇನಾ ನಿವೃತ್ತ ಅಧಿಕಾರಿ ಸುಧೀರ್ ಪೈ ಉಪಸ್ಥಿತರಿದ್ದರು.