ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸು ಫ್ರಮ್ ಸೋ’ ಖ್ಯಾತಿಯ ಜೆ.ಪಿ. ತುಮಿನಾಡು
Wednesday, May 6, 2026
ಮಂಗಳೂರು: ‘ಸು ಫ್ರಮ್ ಸೋ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ನಟ ಮತ್ತು ನಿರ್ದೇಶಕ ಜೆ.ಪಿ. ತುಮಿನಾಡು ಅವರು ರಶ್ಮಿಕಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಮಂಗಳೂರಿನ ಪಿಲಿಕುಳದಲ್ಲಿರುವ ಸ್ಕೌಟ್ ಭವನದಲ್ಲಿ ರಶ್ಮಿಕಾ ಅವರೊಂದಿಗೆ ಜೆ.ಪಿ.ತುಮಿನಾಡ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ನಿರೂಪಕ ನಿರಂಜನ್ ದೇಶಪಾಂಡೆ, ನಟಿ ಸಂಧ್ಯಾ ಅರಕೆರೆ, ನಿರ್ದೇಶಕ ಶ್ರೀನಿಧಿ ಸೇರಿದಂತೆ ಅನೇಕರು ವಿವಾಹ ಸಂಭ್ರಮದಲ್ಲಿ ಭಾಗಿಯಾಗಿ ನವ ದಂಪತಿಗೆ ಶುಭ ಹಾರೈಸಿದ್ದಾರೆ.
ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪ್ರತಿಭೆಯಾದ ಜಯಪ್ರಕಾಶ್ (ಜೆ.ಪಿ.) ತುಮಿನಾಡು ಅವರು ಚಿತ್ರರಂಗಕ್ಕೆ ಬರುವ ಮೊದಲು ದಶಕಕ್ಕೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.
ನಾಟಕಗಳ ರಚನೆ ಮತ್ತು ನಿರ್ದೇಶನದಲ್ಲಿ ಹೆಸರು ಮಾಡಿದ್ದ ಇವರು, ಆರಂಭಿಕ ದಿನಗಳಲ್ಲಿ ಪೈಂಟರ್ ಆಗಿಯೂ ಕೆಲಸ ಮಾಡಿದ್ದರು. 2025ರಲ್ಲಿ ಅತಿ ಕಡಿಮೆ ಬಜೆಟ್‌ನಲ್ಲಿ ಬಿಡುಗಡೆಯಾದ ಇವರ ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರವು ಕಥೆಯೇ ಸಿನಿಮಾದ ನಿಜವಾದ ಹೀರೋ ಎಂಬುದನ್ನು ಸಾಬೀತುಪಡಿಸಿ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರ 125ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿತ್ತು.