ಬಂಟಕಲ್ಲು ಪೊದಮಲೆ ಸಮೀಪ ಬೆಂಕಿ ಆಕಸ್ಮಿಕ, ಮರಗಿಡಗಳು ಬೆಂಕಿಗಾಹುತಿ, ಆಗ್ನಿಶಾಮಕದಳದಿಂದ ಬೆಂಕಿ ಹತೋಟಿಗೆ

ಬಂಟಕಲ್ಲು ಪೊದಮಲೆ ಸಮೀಪ ಬೆಂಕಿ ಆಕಸ್ಮಿಕ, ಮರಗಿಡಗಳು ಬೆಂಕಿಗಾಹುತಿ, ಆಗ್ನಿಶಾಮಕದಳದಿಂದ ಬೆಂಕಿ ಹತೋಟಿಗೆ


ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು-ವಿಶ್ವಕರ್ಮ ಸಂಘದ ಬದಿಯಿಂದ ಪೊದಮಲೆಗೆ ಹಾದು ಹೋಗುವ ರಸ್ತೆಬದಿಯಲ್ಲಿ ಇರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಮೀಪ ಬುಧವಾರ ಮಧ್ಯಾಹ್ನದ ಹೊತ್ತಿಗೆ ಕಿಡಿ ಹೊತ್ತಿದ ಪರಿಣಾಮ ಉರಿಬಿಸಿಲಿನಿಂದ ಒಣಗಿದ ಹುಲ್ಲುಕಡ್ಡಿಗಳಿಗೆ ಬಿದ್ದ ಬೆಂಕಿ ಗಾಳಿಯ ವೇಗಕ್ಕೆ ಹರಡಿ ಸುಮಾರು ಎರಡು ಎಕ್ರೆಗೂ ಹೆಚ್ಚು ಭಾಗದ ಮರಗಿಡ, ಪೊದೆಗಳು ಬೆಂಕಿಗಾಹುತಿಯಾಗಿವೆ.


ಮಾಹಿತಿ ತಿಳಿದ ಶಿರ್ವ ಗ್ರಾ. ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ವಾರ್ಡ್ ಪ್ರತಿನಿಧಿ ಕೆ.ಆರ್. ಪಾಟ್ಕರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ, ಉಡುಪಿ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಅವರು ಬರುವಷ್ಟರಲ್ಲಿ ಸುಮಾರು ನೂರು ಮೀಟರ್‌ವರೆಗೂ ವ್ಯಾಪಿಸಿದ ಬೆಂಕಿಯನ್ನು ಅಗ್ನಿಶಾಮಕದಳದ ಪರಿಶ್ರಮದಿಂದ  ಹತೋಟಿಗೆ ಬಂದ ಪರಿಣಾಮ ಸಮೀದಲ್ಲಿಯೇ ಇದ್ದ ಎರಡು ಮನೆಗಳು ರಕ್ಷಿಸಲ್ಪಟ್ಟಿವೆ. 

ಈ ಸಂದರ್ಭದಲ್ಲಿ ಬಂಟಕಲ್ಲು ನಾಗರಿಕ ಸಮಿತಿಯ ಸದಸ್ಯರು, ರಾಘವೇಂದ್ರ ನಾಯಕ್, ಪಾಲಮೆ, ಉಮೇಶ್ ರಾವ್, ಜಗದೀಶ ಆಚಾರ್ಯ, ವಿರೇಂದ್ರ ಪಾಟ್ಕರ್, ಸಂಜಯ್ ನಾಯಕ್, ಕೃಷ್ಣಮುರ್ತಿ ಪಾಟ್ಕರ್ ಸಹಿತ ಸ್ಥಳೀಯರು ಬೆಂಕಿ ಆರಿಸುವಲ್ಲಿ ಸಹಕರಿಸಿದರು.


ಇಂತಹ ಆಕಸ್ಮಿಕಗಳು ನಡೆದಾಗ ಮೊದಲು ಅಪವಾದಕ್ಕೆ ಗುರಿಯಾಗುವುದು ಮೆಸ್ಕಾಂ ಇಲಾಖೆ. ಇಲಾಖಾ ಸಿಬ್ಬಂಧಿಗಳು ವಿದ್ಯುತ್ ತಂತಿಗಳು ಹಾದು ಹೋಗುವ ಭಾಗದಲ್ಲಿರುವ ಗಿಡಮರಗಳ ಗೆಲ್ಲುಗಳನ್ನು ಕಡಿಯಲು ಹೋದಾಗ ಜಾಗದವರೇ ತಕರಾರು ತೆಗೆದು ತಡೆಯುತ್ತಾರೆ. 

ವಿದ್ಯುತ್ ತಂತಿಗಳು ಹಾದುಹೋಗುವ ಅಡಿಭಾಗದಲ್ಲೇ ತೆಂಗಿನ ಸಸಿಗಳು, ಇನ್ನಿತರ ಗಿಡಗಳನ್ನು ನೆಡುತ್ತಾರೆ. ಗಾಳಿಗೆ ಒಣಗಿದ ತೆಂಗಿನ ಸೋಗೆಗಳು ವಿದ್ಯುತ್ ಪ್ರವಹಿಸುತ್ತಿರುವ ತಂತಿಗಳ ಮೇಲೆ ಬಿದ್ದಾಗ ಶಾರ್ಟ್‌ಸರ್ಕಿಟ್ ಉಂಟಾಗಿ ಕಿಡಿಗಳು ನೆಲಕ್ಕೆ ಬಿದ್ದಾಗ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಮೊದಲೇ ಸಿಬ್ಬಂದಿಗಳ ಕೊರತೆ ಇದೆ. ಇಲಾಖೆಯೊಂದಿಗೆ ಸ್ಥಳೀಯರೂ ಸಹಕರಿಸಬೇಕಾಗಿದೆ. ತಂತಿಗಳು ಹಾದು ಹೋಗುವಲ್ಲಿ ಗಿಡ, ಮರಗಿಡಗಳನ್ನು ಬೆಳೆಸಬಾರದು. ಇದ್ದಲ್ಲಿ ಗೆಲ್ಲುಗಳನ್ನು ಕತ್ತರಿಸಲು ಇಲಾಖಾ ಸಿಬ್ಬಂಧಿಗಳಿಗೆ ಅವಕಾಶ ಮಾಡಿ ಕೊಡಬೇಕು. ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳೂ ಈ ನಿಟ್ಟಿನಲ್ಲಿ ಸಹಕರಿಸಬೇಕು ಎನ್ನುತ್ತಾರೆ ಮೆಸ್ಕಾಂ ಶಿರ್ವ ಸೆಕ್ಷನ್ ಆಫೀಸರ್ ಮಂಜಪ್ಪ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article