ಕೆಎಸ್‌ಆರ್‌ಟಿಸಿ ಬಸ್‌ನ ಕಂಡೆಕ್ಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ

ಕೆಎಸ್‌ಆರ್‌ಟಿಸಿ ಬಸ್‌ನ ಕಂಡೆಕ್ಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ

ಮಂಗಳೂರು: ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದ ಮಂಗಳೂರು-ಧರ್ಮಸ್ಥಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಕಂಡೆಕ್ಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಹಲ್ಲೆಗೊಳಗಾದವರು ಕಂಡೆಕ್ಟರ್ ಗಣೇಶ್ ಎಸ್ ಎಂದು ಗುರುತಿಸಲಾಗಿದೆ.

ಮೇ 8ರಂದು ಧರ್ಮಸ್ಥಳದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎ 19 ಎಫ್ 3264 ಸಂಖ್ಯೆಯ ಬಸ್‌ನಲ್ಲಿ ಉಜಿರೆಯಿಂದ ಇಬ್ಬರು ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಬೆಳ್ತಂಗಡಿ ಹಾಗೂ ಕಾರಿಂಜೆ ಕ್ರಾಸ್‌ಗೆ ಟಿಕೆಟ್ ಪಡೆದಿದ್ದರು. ಈ ವೇಳೆ ಕೆಲ ಯುವಕರು ಮಹಿಳೆಯರನ್ನು ಸಂತೆಕಟ್ಟೆ ಬಳಿ ಇಳಿಯುವಂತೆ ಸೂಚಿಸಿದ್ದು, ಟಿಕೆಟ್‌ನಲ್ಲಿ ನಮೂದಿಸಿದ ಸ್ಥಳದಲ್ಲೇ ಇಳಿಯುವಂತೆ ಕಂಡೆಕ್ಟರ್ ಸೂಚಿಸಿದ್ದಾರಂತೆ. ಆದರೂ ಮಹಿಳೆಯರು ಸಂತೆಕಟ್ಟೆಯಲ್ಲಿ ಇಳಿದು ಈ ವಿಚಾರವನ್ನು ಯುವಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಐವರು ಯುವಕರು ಕಾರಿನಲ್ಲಿ ಬಸ್‌ನ್ನು ಬೆನ್ನಟ್ಟಿ ಪುಂಜಾಲಕಟ್ಟೆ ಬಳಿ ಅಡ್ಡಗಟ್ಟಿ ಕಂಡೆಕ್ಟರ್ ಗಣೇಶ್ ಎಸ್ ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯು ಪುಂಜಾಲಕಟ್ಟೆ ಪೊಲೀಸ್ ಠಾಣೆಯಿಂದ ಅಲ್ಪ ದೂರದಲ್ಲೇ ನಡೆದಿದೆ.

ಗಾಯಗೊಂಡ ಕಂಡೆಕ್ಟರ್‌ಗೆ ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article