ಮೃತಪಟ್ಟ ಬಾಲಕೃಷ್ಣ ಭಟ್: ಎಲುಬು ಮತ್ತು ಚರ್ಮದ ದಾನ
ಜೀವಿತಾವಧಿಯಲ್ಲಿಯೇ ಬಾಲಕೃಷ್ಣ ಭಟ್ ಅವರು ತಮ್ಮ ದೇಹವನ್ನು ಮರಣದ ನಂತರ ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅವರ ಮಹತ್ವದ ಆಶಯವನ್ನು ಗೌರವಿಸಿದ ಕುಟುಂಬದವರು ಎಲುಬು ಮತ್ತು ಚರ್ಮದ ದಾನಕ್ಕೆ ಸಮ್ಮತಿ ಸೂಚಿಸಿದ್ದು, ಅನೇಕ ರೋಗಿಗಳಿಗೆ ಹೊಸ ಬದುಕಿನ ಆಸೆಯನ್ನು ನೀಡುವುದರ ಜೊತೆಗೆ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸೆಗೆ ಮಹತ್ತರ ಕೊಡುಗೆ ನೀಡಿದ್ದಾರೆ.
ವೆನ್ಲಾಕ್ ಆಸ್ಪತ್ರೆಯ ಟ್ರಾನ್ಸ್‌ಪ್ಲಾಂಟ್ ಸಂಯೋಜಕರಾದ ಪದ್ಮಾವತಿ ಹಾಗೂ ಅಕ್ಷತಾ ಶೆಟ್ಟಿ ಅವರ ತುರ್ತು ಕರೆ ಹಿನ್ನೆಲೆಯಲ್ಲಿ, ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಡಾ. ಶಾಂತರಾಮ ಶೆಟ್ಟಿ ಟಿಷ್ಯೂ ಬ್ಯಾಂಕ್‌ನ ಬಹುಶಾಖಾ ತಜ್ಞರ ತಂಡವು ತಕ್ಷಣ ಕಾರ್ಯಪ್ರವೃತ್ತವಾಯಿತು. ಡಾ. ವರುಣ್ ಶೆಟ್ಟಿ ಅವರ ನೇತೃತ್ವದಲ್ಲಿ ಡಾ. ನಿರ್ಮಲ್ ಬಾಬು, ಡಾ. ವಿನಯ್ ಕುಮಾರ್, ಡಾ. ಅನೂಪ್ ಹೆಗ್ಡೆ ಹಾಗೂ ಪ್ಲಾಸ್ಟಿಕ್ ಸರ್ಜರಿ ತಜ್ಞರಾದ ಡಾ. ಸಂದೇಶ್ ಅವರ ತಂಡವು ಎರಡೂ ಉಲ್ನಾ, ಎರಡೂ ಹ್ಯೂಮರಸ್, ಎರಡೂ ಫೀಮರ್, ಎರಡೂ ಟಿಬಿಯಾ ಎಲುಬುಗಳು ಹಾಗೂ ಚರ್ಮದ ಗ್ರಾಫ್ಟ್‌ಗಳನ್ನು ಯಶಸ್ವಿಯಾಗಿ ಸಂಗ್ರಹಿದರು.
ದೇಹದ ಗೌರವವನ್ನು ಕಾಪಾಡುವ ಉದ್ದೇಶದಿಂದ ಹಾಗೂ ದೇಹದ ಆಕಾರದಲ್ಲಿ ಯಾವುದೇ ವ್ಯತ್ಯಾಸ ಉಂಟಾಗದಂತೆ ವಿಶೇಷವಾಗಿ ತಯಾರಿಸಲಾದ ಪ್ಲಾಸ್ಟಿಕ್ ಎಲುಬುಗಳನ್ನು ಮರುಸ್ಥಾಪಿಸಲಾಯಿತು. ಈ ಸಂಪೂರ್ಣ ಪ್ರಕ್ರಿಯೆ ಯಶಸ್ವಿಯಾಗಲು ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಮತ್ತು ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಆಡಳಿತ ಮಂಡಳಿ, ನರ್ಸಿಂಗ್ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಟಿಷ್ಯೂ ಬ್ಯಾಂಕ್ ಸಿಬ್ಬಂದಿಯ ಸಮಗ್ರ ಸಹಕಾರ ಲಭಿಸಿತು.
ಈ ಪ್ರೇರಣಾದಾಯಕ ಘಟನೆ ಎಲುಬು ಮತ್ತು ಚರ್ಮದ ದಾನದ ಮಹತ್ವವನ್ನು ಮತ್ತೊಮ್ಮೆ ಸಮಾಜದ ಮುಂದೆ ತಂದು ನಿಲ್ಲಿಸಿದೆ. ದುಃಖದ ಸಂದರ್ಭದಲ್ಲಿಯೂ ಕುಟುಂಬದವರು ತೋರಿದ ಈ ಮಾನವೀಯ ನಿರ್ಧಾರ ಸಮಾಜಕ್ಕೆ ಮಾದರಿಯಾಗಿದೆ. ವೈದ್ಯಕೀಯ ವಲಯವು ದಾನಿ ಹಾಗೂ ಅವರ ಕುಟುಂಬದ ಈ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಗೌರವ ಸಲ್ಲಿಸುತ್ತಿದ್ದು, ಸಾರ್ವಜನಿಕರು ಅಂಗ, ಎಲುಬು ಮತ್ತು ಚರ್ಮದ ದಾನದ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.