ಮಂಗಳೂರು: ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ಎಂಬಿಎ (ಐಬಿ) ಸಂಧ್ಯಾ ಕಾರ್ಯಕ್ರಮ ಮತ್ತು ಎಂಬಿಎ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಿರ್ವಹಣೆ ಮತ್ತು ಸಾಂಸ್ಕೃತಿಕ ಸಂಭ್ರಮ ʼಇಕ್ವಿನೊಕ್ಸ್ ಟುಕೆಟುಸಿಕ್ಸ್- ಸಂಧ್ಯಾ ಮಂಥನ್ʼ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ಓವರ್ ಆಲ್ ವಿನ್ನರ್ ಆಗಿ ಎಸ್ ಡಿ ಎಂ ಕಾಲೇಜು ಹೊರಹೊಮ್ಮಿದರೆ ರನ್ನರ್ ಆಗಿ ಕೆನರಾ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನ ಹಾಗೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಮಂಗಳೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಶನಿವಾರ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಫರೀದ್, ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನು ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದರೊಂದಿಗೆ ತಮ್ಮ ತಮ್ಮ ಕುಟುಂಬಕ್ಕೆ ದಾರಿದೀಪವಾಗಿ ದೇಶಕ್ಕೂ ಕೊಡುಗೆ ನೀಡಿ ಎಂದು ಹಾರೈಸಿದರು. ಬಹುಮಾನ ಸಿಗದವರು ಇಲ್ಲಿನ ಪರಾಭವವನ್ನೇ ಮೆಟ್ಟಿಲುಗಳಾಗಿ ರೂಪಿಸಿಕೊಂಡು ಯಶಸ್ಸಿನತ್ತ ಮುನ್ನುಗ್ಗಿ ಎಂದು ಉತ್ತೇಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ. ಎಸ್, ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ನಿರಂತರ ಪ್ರಯತ್ನ ಹಾಗೂ ಆತ್ಮಸ್ಥೈರ್ಯ ಮುಖ್ಯವಾಗಿದ್ದು, ವಿವಿಧ ವೃತ್ತಿಪರ ಕೌಶಲ್ಯ ತರಬೇತಿಯನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆನೀಡಿದರು.
ಕಾಲೇಜಿನ ಸಂಧ್ಯಾ ಕಾರ್ಯಕ್ರಮದ ಸಿಬ್ಬಂಧಿ ಸಲಹೆಗಾರರಾದ ಪ್ರೊ. ಜಯವಂತ ನಾಯಕ್ ಅವರು ಮಾತನಾಡಿ, ಕಲಿಕೆಯಲ್ಲಿ ಅಂಕ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ನಿಮ್ಮನ್ನು ನೀವು ಹೇಗೆ ಅಭಿವ್ಯಕ್ತಪಡಿಸುತ್ತೀರಿ ಎಂಬುದು ಕೂಡ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಲು ಮುಖ್ಯವಾಗುತ್ತದೆಯಾದರಿಂದ ವೃತ್ತಿಪರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಸಿಬ್ಬಂಧಿ ಸಲಹೆಗಾರರಾದ ಪ್ರೊ. ಅಬೂಬಕರ್ ಸಿದ್ದಿಕ್ ಅವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣದ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಇಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಗೆಳೆಯರ ಬಳಗವನ್ನು ಸಂಪಾದಿಸಿಕೊಂಡು ಸಂತೋಷದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅವರಲ್ಲಿ ನಾಯಕತ್ವ ಗುಣ ಹಾಗೂ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ಎಂಬಿಎ (ಐಬಿ) ವಿಭಾಗದ ಉಪನ್ಯಾಸಕ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಖಜಾಂಜಿ ರಾಜೇಶ್ ಕುಮಾರ್ ಅವರು ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಅಹಮದ್ ಶೋವ್ಹಾನ್ ವಂದಿಸಿ, ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಧ್ಯಾ ಕಾರ್ಯಕ್ರಮದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಭಾಗವಹಿಸಿದ್ದರು.