ನೀಟ್ ಪರೀಕ್ಷೆ ರದ್ದು-ಕೇಂದ್ರ ಸರಕಾರದ ಆಡಳಿತಾತ್ಮಕ ವೈಫಲ್ಯ: ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಆರೋಪ

ನೀಟ್ ಪರೀಕ್ಷೆ ರದ್ದು-ಕೇಂದ್ರ ಸರಕಾರದ ಆಡಳಿತಾತ್ಮಕ ವೈಫಲ್ಯ: ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಆರೋಪ


ಮೂಡುಬಿದಿರೆ: ಕರ್ನಾಟಕದ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ರಾಷ್ಟ್ರಾದ್ಯಂತ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದಿದ್ದ 'ನೀಟ್-ಯುಜಿ 2026' ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲದೆ ಯುವಜನತೆಗೆ ಬಗೆದ ಕ್ರೂರ ದ್ರೋಹವಾಗಿದೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 

ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಈ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚುಗಳನ್ನು ಮಾಡಿದ್ದರು. ಆದರೆ ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಅನಿಶ್ಚಿತತೆ ಮತ್ತು ಸಂಕಷ್ಟಕ್ಕೆ ತಳ್ಳಿದೆ ಎಂದರು.

2024ರಲ್ಲೇ ನಮ್ಮ ಸರ್ಕಾರವು ನೀಟ್ ಪರೀಕ್ಷೆಯು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ, ಶಾಲಾ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ದಾಖಲಾತಿ ವಿಚಾರದಲ್ಲಿ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಸದನ ನಿರ್ಣಯ ಕೈಗೊಂಡಿತ್ತು. ಅಂದಿನ ನಮ್ಮ ಕಾಳಜಿ ಎಷ್ಟು ಸತ್ಯ ಮತ್ತು ಅನಿವಾರ್ಯವಾಗಿತ್ತು ಎನ್ನುವುದನ್ನು ಇಂದಿನ ಪರೀಕ್ಷಾ ರದ್ದತಿಯು ಸಾಬೀತುಪಡಿಸಿದೆ. ಸಿಇಟಿ ಅತ್ಯುತ್ತಮವಾಗಿದ್ದು, ನೀಟ್ ಬೇಕಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ನೇಮಕಾತಿ ಪರೀಕ್ಷೆಗಳಿಂದ ಹಿಡಿದು ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳವರೆಗೆ ಪೇಪರ್ ಲೀಕ್ ಪ್ರಕರಣಗಳು ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ರಕ್ಷಣೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹೊಣೆ ಹೊರಬೇಕಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. 

ಯುವಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು. ಈ ಬಗ್ಗೆ ಪಾರದರ್ಶಕ, ಕಾಲಮಿತಿಯ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಸಿಇಟಿ ಮಾದರಿಯಲ್ಲೇ ಪರೀಕ್ಷೆಗಳು ನಡೆಯಬೇಕು ಮತ್ತು ಅಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಜ್ಯಗಳ ಅಧಿಕಾರವನ್ನು ಪುನಃಸ್ಥಾಪಿಸಬೇಕು. ಪೇಪರ್ ಲೀಕ್‌ನಿಂದ ತೊಂದರೆಗೊಳಗಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರ ಜೊತೆ ನಾವಿದ್ದೇವೆ. ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತೆ ಮಾಡುವುದು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಪದ್ಮಪ್ರಸಾದ್ ಜೈನ್ ಮಾಹಿತಿ ನೀಡಿದರು.

ಚುನಾವಣೆ ಮುಗಿದ ಬಳಿಕ ತೈಲ ಬೆಲೆ ಏರಿಕೆಯಾಗಿರುವ ಹಿಂದಿನ ಉದ್ದೇಶವೇನು? ವಿದೇಶಾಂಗ ನೀತಿಯ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಮಂಗಳೂರು-ಕಾಕ೯ಳ ರಾ.ಹೆ.ಯ ಬನ್ನಡ್ಕದಲ್ಲಿ ನಡೆಯುತ್ತಿರುವ ಅಪಘಾತಕ್ಕೆ ಅವೈಜ್ಞಾನಿಕ ರೀತಿಯ ಕಾಮಗಾರಿಯೇ ಕಾರಣ. ಇದನ್ನು ಸರಿಪಡಿಸುವುದು ಸಂಸದರ ಜವಾಬ್ದಾರಿ. ಆದ್ದರಿಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದರು. 

ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ಮರ್ವಿನ್ ಲೋಬೋ, ಕೆಡಿಪಿ ಸದಸ್ಯ ತುಕ್ರಪ್ಪ ಕೆಂಬಾರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article