ರಾಜ್ಯಸಭೆ ಚುನಾವಣೆ ಚರ್ಚೆಗೆ ಸಿಎಂ ದೆಹಲಿಗೆ: ಸಚಿವ ಈಶ್ವರ ಬಿ. ಖಂಡ್ರೆ
ಅವರು ಮಂಗಳವಾರ ಶ್ರೀಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಭಿವೃದ್ಧಿ ಹಾಗೂ ಅರಣ್ಯ ಸಂಬಂಧಿತ ವಿಚಾರಗಳ ಪ್ರಗತಿ ಪರಿಶೀಲನೆಗಾಗಿ ಭೇಟಿ ನೀಡಿರುವುದಾಗಿ ತಿಳಿಸಿದರು.
ಸಂಪುಟ ವಿಸ್ತರಣೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ಊಹಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ’ ಎಂದರು.
ಡೀಮ್ಡ್ ಫಾರೆಸ್ಟ್ ಗೊಂದಲಕ್ಕೆ ಶೀಘ್ರ ಪರಿಹಾರ:
ರಾಜ್ಯದಲ್ಲಿ ಸುಮಾರು 11,900 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶ ಇರುವುದಾಗಿ ಹೇಳಿದ ಸಚಿವರು, 2022ರಲ್ಲಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಸುಮಾರು 3.30 ಲಕ್ಷ ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಉಲ್ಲೇಖಿಸಿರುವುದರಿಂದ ಗೊಂದಲ ಉಂಟಾಗಿದೆ ಎಂದರು.
ಈ ಪ್ರದೇಶಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆ, ಕಂದಾಯ ಮತ್ತು ಖಾಸಗಿ ಭೂಮಿಗಳೂ ಸೇರಿಕೊಂಡಿದ್ದು, ಜನವಸತಿ ಪ್ರದೇಶದ ಜನರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಗೊಂದಲವನ್ನು ಶೀಘ್ರ ಪರಿಹರಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು ತಿಳಿಸಿದರು.
ಜನವಸತಿ ಪ್ರದೇಶಗಳು ಅರಣ್ಯ ಭೂಮಿಯೊಳಗೆ ಬಂದಿದ್ದರೆ, ಅಷ್ಟೇ ಪ್ರಮಾಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಯುತ್ತಿದ್ದು, ಈಗಾಗಲೇ 60 ಶೇಕಡಾ ಕಾರ್ಯ ಪೂರ್ಣಗೊಂಡಿದೆ. ಉಳಿದ 40 ಶೇಕಡಾ ಸರ್ವೆಯನ್ನು ಎರಡು ತಿಂಗಳೊಳಗೆ ಮುಗಿಸುವ ಗುರಿ ಹೊಂದಲಾಗಿದೆ ಎಂದರು.
ಕಂದಾಯ ಇಲಾಖೆಯ ಸರ್ವೇಯರ್‌ಗಳ ಪ್ರತಿಭಟನೆಯಿಂದ ಸರ್ವೆ ಕಾರ್ಯಕ್ಕೆ ಅಡಚಣೆ ಉಂಟಾಗಿದ್ದು, ಈ ಕಾರ್ಯವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಹೆಚ್ಚುವರಿ ಸರ್ವೇಯರ್‌ಗಳನ್ನು ನೇಮಕ ಮಾಡುವಂತೆ ಸಚಿವ ಸಂಪುಟ ಸಭೆಯಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ:
ಜನವಸತಿ ಪ್ರದೇಶಗಳಲ್ಲಿ ಆನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.
ವನ್ಯಜೀವಿಗಳ ಚಲನವಲನ ಪತ್ತೆಹಚ್ಚಲು ಡ್ರೋನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದ್ದು, ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತ ಆನೆಗಳು ನುಗ್ಗದಂತೆ ಆನೆಕಂದಕ ನಿರ್ಮಾಣ ಹಾಗೂ ಸೋಲಾರ್ ಬೇಲಿ ಅಳವಡಿಸುವ ಕಾರ್ಯ ನಡೆಯಲಿದೆ ಎಂದರು.
ಚಿರತೆ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಬೋನುಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಮಾನವ ಜೀವ ರಕ್ಷಣೆ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದರು.