ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ: ಸಚಿವ ಈಶ್ವರ ಬಿ. ಖಂಡ್ರೆ

ನದಿಗೆ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ: ಸಚಿವ ಈಶ್ವರ ಬಿ. ಖಂಡ್ರೆ


ಸುಬ್ರಹ್ಮಣ್ಯ: ಕುಮಾರಧಾರಾ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲಿನ ನದಿಗಳಿಗೆ ತ್ಯಾಜ್ಯ ನೀರು ಹರಿಸಲಾಗುತ್ತಿರುವ ಕುರಿತು ಹಲವು ದೂರುಗಳು ಬಂದಿವೆ ಎಂದು  ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಈ ಹಿನ್ನೆಲೆಯಲ್ಲಿ ಪರಿಸರ ಇಲಾಖೆಗೆ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ತ್ಯಾಜ್ಯ ನೀರನ್ನು ಸಂಸ್ಕರಿಸದೆ ನದಿಗೆ ಬಿಡುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಸ್ಥಳೀಯ ಆಡಳಿತಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿವೆ ಎಂದು ಎಚ್ಚರಿಸಿದರು.

ಎಲ್ಲಾ ತ್ಯಾಜ್ಯ ಉತ್ಪಾದನಾ ಸಂಸ್ಥೆಗಳು ಕಡ್ಡಾಯವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿರಬೇಕು ಎಂದು ಸೂಚಿಸಿದರು.

ಕುಕ್ಕೆ ಕ್ಷೇತ್ರ ಪ್ಲಾಸ್ಟಿಕ್ ಮುಕ್ತಕ್ಕೆ ಕ್ರಮ:

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಕ್ಷೇತ್ರಕ್ಕೆ ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ವೇಳೆ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎರಡು ಹಂತದ ತಪಾಸಣೆ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.

ಅರಣ್ಯ ಒತ್ತುವರಿ ತೆರವು:

2015ರ ನಂತರ ನಡೆದ ಅರಣ್ಯ ಒತ್ತುವರಿಗಳನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಸಚಿವರು ಹೇಳಿದರು. ಆದರೆ ಸಣ್ಣ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಸುಮಾರು 5,000 ಎಕರೆ ಅರಣ್ಯ ಭೂಮಿಯನ್ನು ಇಲಾಖೆ ವಾಪಸು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ರಸ್ತೆ ಅಭಿವೃದ್ಧಿಗೆ ಇಲಾಖೆ ಅನುಮತಿ ಕಡ್ಡಾಯ:

ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ ಸೇರಿದಂತೆ ಅರಣ್ಯ ಪ್ರದೇಶದೊಳಗಿನ ರಸ್ತೆ ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ ಎಂದು ಸಚಿವರು ತಿಳಿಸಿದರು.

ಅರಣ್ಯ ಭೂಮಿ ಬಳಸಬೇಕಾದಲ್ಲಿ ಸಮ ಪ್ರಮಾಣದ ಪರ್ಯಾಯ ಭೂಮಿಯನ್ನು ಇಲಾಖೆಗೆ ನೀಡಬೇಕು. ಜೊತೆಗೆ ವೆಚ್ಚ ಭರಿಸಿ ಕೇಂದ್ರ ಅರಣ್ಯ ಸಚಿವಾಲಯದ ಅನುಮತಿಯನ್ನೂ ಪಡೆಯಬೇಕು ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article