ಅಸ್ವಸ್ಥಗೊಂಡ ವ್ಯಕ್ತಿಗೆ ನೆರವು ಒದಗಿಸಿ ಜೀವ ಉಳಿಸಿದ ಕಾನ್ಸ್‌ಟೇಬಲ್
Friday, June 12, 2026
ಬಂಟ್ವಾಳ: ರಾತ್ರಿ ವೇಳೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು ರಾತ್ರಿ ಹಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ನೆರವು ಒದಗಿಸಿ ಜೀವ ಉಳಿಸಿದ ಘಟನೆ ಬಿ.ಸಿ. ರೋಡಿನ ಗೂಡಿನ ಬಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಗೂಡಿನಬಳಿ ನಿವಾಸಿ ಅಶ್ರಫ್ ಅವರಿಗೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥತೆ ಉಂಟಾಗಿತ್ತು. ಈ ಸಂದರ್ಭ ಅವರ ಮನೆಯೊಳಗಿನಿಂದ ಜೋರಾಗಿ ಬಾಗಿಲು ಬಡಿಯುವ ಹಾಗೂ ಆಕ್ರಂದನದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದರು.
ಸ್ಥಳಕ್ಕೆ ತಲುಪಿದಾಗ ಅಶ್ರಫ್ ಅವರಿಗೆ ಲಘು ಹೃದಯಾಘಾತ ಸಂಭವಿಸಿರುವುದು ಗಮನಕ್ಕೆ ಬಂದಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಂಟ್ವಾಳ ನಗರ ಠಾಣೆಯ ಕಾನ್ಸ್‌ಟೇಬಲ್ ವಿನೋದ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಿಪಿಆರ್ ನೆರವು ಒದಗಿಸಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.