ಬಾರಿ ಮಳೆಗೆ ತಾತ್ಕಾಲಿಕ ಸಂಪರ್ಕ ರಸ್ತೆ ಕಡಿತ

ಬಾರಿ ಮಳೆಗೆ ತಾತ್ಕಾಲಿಕ ಸಂಪರ್ಕ ರಸ್ತೆ ಕಡಿತ


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ ಗಾಳಿ, ಸಹಿತ ಭಾರಿ ಮಳೆಯಾಗಿದೆ. ಉಜಿರೆ ಹಾಗೂ ಕನ್ಯಾಡಿ-1 ಗ್ರಾಮ ವ್ಯಾಪ್ತಿಯ ಅಂಬಡಬೆಟ್ಟು ಎಂಬ ಪ್ರದೇಶದಲ್ಲಿ ಹರಿಯುವ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸಂಪರ್ಕ ರಸ್ತೆ ಮಳೆಗೆ ಕೊಚ್ಚಿ ಹೋಗಿದೆ. ಪರಿಣಾಮ ಪ್ರದೇಶದ ಜನರಿಗೆ ಉಜಿರೆ ಹಾಗೂ ಇತರೆಡೆಯ ಸಂಪರ್ಕ ಬಹುತೇಕ ಕಡಿತಗೊಂಡಿದೆ.

ಉಜಿರೆ, ನಿಡಿಗಲ್ ಮೂಲಕ ನಡ, ಇಂದಬೆಟ್ಟು, ಕೊಲ್ಲಿ, ಗುರಿಪಳ್ಳ, ಪಡ್, ಕಯ್ಯಂಗು ಮೊದಲಾದ ಪ್ರದೇಶದ ಸಾವಿರಾರು ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ಅಂಬಡಬೆಟ್ಟು ನೂತನ ಕಿರು ಸೇತುವೆ 2.50 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಹಿಂದೆ ಇದ್ದ ಸೇತುವೆಯನ್ನು ತೆರೆವುಗೊಳಿಸಿ ಕಾಮಗಾರಿ ನಡೆಸುತ್ತಿದ್ದು, ಅದರ ಬದಿಯಲ್ಲಿ ಮಣ್ಣು ಹಾಕಿ ತಾತ್ಕಾಲಿಕ ಸೇತುವೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಹಳ್ಳ ಉಕ್ಕಿ ಹರಿದು ತಾತ್ಕಾಲಿಕ ರಸ್ತೆ ಮೇಲೆ ಮೂರು ಅಡಿಯಷ್ಟು ನೀರು ಹರಿದು ಮಣ್ಣು ಕೊಚ್ಚಿ ಹೋಗಿದೆ.

ಈ ವೇಳೆ, ಸ್ಥಳೀಯರು ಹಾಗೂ ಪೊಲೀಸ್ ಇಲಾಖೆ ಸೇರಿ ಎರಡು ಕಡೆಗಳಿಂದ ವಾಹನಗಳು ಚಲಿಸದಂತೆ ಕ್ರಮ ಕೈಗೊಂಡಿದ್ದಾರೆ. ಮಳೆ ಇದೇ ರೀತಿ ಮುಂದುವರಿದರೆ ತಾತ್ಕಾಲಿಕ ರಸ್ತೆ ಸಂಪೂರ್ಣ ನೀರು ಪಾಲಾಗಲಿದೆ. ಅಂಬಡಬೆಟ್ಟು ಪ್ರದೇಶದಲ್ಲಿ ಸಂಪರ್ಕ ಕಡಿತಗೊಂಡಿರುವ ಕಾರಣ ಸ್ಥಳೀಯರು ಹಾಗೂ ಶಾಲಾ ಮಕ್ಕಳು ಉಜಿರೆ ಹಾಗೂ ಇತರಡೆ ತರಲು 20 ಕಿ.ಮೀ ಸುತ್ತಿ ಬಳಸಿ ಬರಬೇಕಿದೆ. ಕಿರು ಸೇತುವೆಯನ್ನು ಮಳೆ ಆರಂಭಕ್ಕೆ ಮೊದಲು ನಿರ್ಮಿಸಿ ಕೊಡುವಂತೆ ಸ್ಥಳೀಯರು ಸಾಕಷ್ಟು ಬಾರಿ ಇಲಾಖೆ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದಿದ್ದರು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಈ ಮಳೆಗಾಲದಲ್ಲಿ ಈ ಪ್ರದೇಶದ ಜನರು ಸೇತುವೆ ಇಲ್ಲದೇ ಸಾಕಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಂಗಡಿಗಳಿಗೆ ನುಗ್ಗಿದ ನೀರು: 

ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕ ಪ್ರದೇಶದ ಒಳ ರಸ್ತೆಯಲ್ಲಿ ನೀರು ಹರಿದು ಕೆಲವು ಅಂಗಡಿಗಳ ಮುಂಭಾಗ ಜಲಾವೃತವಾಯಿತು. ಇಲ್ಲಿ ಮೋರಿಯೊಂದು ಬ್ಲಾಕ್ ಆಗಿದ್ದು, ಮಳೆ ನೀರು ರಸ್ತೆಯಲ್ಲಿ ಹರಿದು ಅಂಗಡಿಗಳ ಮುಂಭಾಗದವರೆಗೂ ಬರಲು ಕಾರಣವಾಯಿತು. ಮಳೆಯ ಜತೆ ಗಾಳಿಯು ಇದ್ದು ನೂರಾರು ಅಡಕೆ, ರಬ್ಬರ್ ಮರಗಳು ಮುರಿದುಬಿದ್ದಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿದೆ. ಖಾಸಗಿ ಕಂಪನಿಗಳ ಮೊಬೈಲ್ ಟವರ್‌ಗಳು ಹಲವು ಹೊತ್ತು ನಿಷ್ಕ್ರಿಯಗೊಂಡು ಗ್ರಾಹಕರು ಪರದಾಡುವಂತಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article