ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ
ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಈ ಘಾಟಿ ರಸ್ತೆಯ ತಿರುವೊಂದರ ತಡೆಗೋಡೆಯ ಸಮೀಪ ಚಿರತೆ ಆರಾಮವಾಗಿ ಕುಳಿತಿರುವ ದೃಶ್ಯ ಕಂಡುಬಂದಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಮುಂಗಾರು ಮಳೆ ಆರಂಭವಾಗಿರುವುದರಿಂದ ವೀಕೆಂಡ್ನಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಘಾಟಿ ಪ್ರದೇಶದಲ್ಲಿ ಪ್ರಸ್ತುತ ಮುಂಗಾರು ಮಳೆ ಚುರುಕಾಗಿದ್ದು, ರಸ್ತೆಯುದ್ದಕ್ಕೂ ದಟ್ಟವಾದ ಮಂಜು ಮುಸುಕುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ರಸ್ತೆಯ ದೃಶ್ಯತೆ ತೀರಾ ಕಡಿಮೆಯಾಗುತ್ತಿದೆ.
ಅಂದ್ರೆ ಮಂಜು ಕವಿದ ವಾತಾವರ ಇರುವಾಗ ಬಹಳ ದೂರದ ವಸ್ತುಗಳು ಸಾಮಾನ್ಯವಾಗಿ ಮಬ್ಬಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿ ಅಥವಾ ಅರಣ್ಯ ಪ್ರದೇಶದ ಸಮೀಪ ಕಾಡುಪ್ರಾಣಿಗಳ ಚಲನೆ ತಕ್ಷಣ ಗಮನಕ್ಕೆ ಬಾರದಿರುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಫೋಟೋ ಅಥವಾ ಸೆಲ್ಫಿ ಪಡೆಯಲು ವಾಹನದಿಂದ ಇಳಿಯುವ ಪ್ರವಾಸಿಗರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.