ಪುರಸಭೆಯಿಂದ ನಿಮಾ೯ಣವಾಗದ ಚರಂಡಿ ವ್ಯವಸ್ಥೆ: ಮೂಡುಬಿದಿರೆಯ ವಿವಿಧ ಕಡೆಗಳಲ್ಲಿ ರಸ್ತೆಗಳಲ್ಲಿಯೇ ಹರಿಯುತ್ತಿದೆ ಮಳೆ ನೀರು
ಮೂಡುಬಿದಿರೆ ಪುರಸಭೆಯು ಮಳೆಗಾಲಕ್ಕೆ ಅಗತ್ಯವಾಗಿ ಬೇಕಾಗಿದ್ದ ತುತು೯ ಕಾಮಗಾರಿಗಳಾದ ರಸ್ತೆ ಬದಿಗಳಲ್ಲಿ ಚರಂಡಿಗಳನ್ನು ನಿಮಾ೯ಣ ಮಾಡದೆ ಇರುವುದರಿಂದ ಜ್ಯೋತಿನಗರ, ಕೃಷ್ಣಕಟ್ಪೆ ಹಾಗೂ ಸಮಗಾರ ಗುಂಡಿ ಬಳಿ ಮಳೆ ನೀರು ಹೋಗಲು ಜಾಗವಿಲ್ಲದೆ ರಸ್ತೆಯಲ್ಲಿಯೇ ನೀರು ಹರಿದು ಈಜುಕೊಳಗಳು ನಿರ್ಮಾಣವಾಗುತ್ತಿದೆ.
ಕೃಷ್ಣಕಟ್ಟೆ ಮಾರ್ಕೆಟ್ ಕಟ್ಟಡದ ಎದುರಿನ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡು ಎದುರಿನಲ್ಲಿರುವ ಆಟೋ ಪಾಕ್೯ ಕಡೆಗೆ ಹರಿಯುತ್ತಿರುವುದರಿಂದ ರಸ್ತೆ ದಾಟುವವರಿಗೆ ಕಷ್ಟವಾಗುತ್ತಿದೆ. ಯಾವುದಾದರೂ ವಾಹನ ಸ್ವಲ್ಪ ವೇಗವಾಗಿ ಹೋಯಿತೆಂದರೆ ರಸ್ತೆ ಬದಿ ನಿಂತವರ ಮೈಮೇಲೆಯೇ ನೀರು ಹಾರಿ ಬೀಳುತ್ತದೆ.
ಸಮಗಾರಗುಂಡಿ ಬಾಂಬೆ ಶಾಂತ್ ಡ್ರೈ ಕ್ಲೀನ್ ಶಾಪ್ ಎದುರು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ, ಜೋರು ಮಳೆ ಬಂದಾಗ ಹಾಗೂ ಮಳೆ ನಿಂತ ಮೇಲೂ ರಸ್ತೆಯಲ್ಲಿ ನೀರು ನಿಂತು ಈಜುಕೊಳದಂತಾಗುತ್ತಿದೆ. ರಸ್ತೆಯ ಮೇಲ್ಭಾಗದ ಏರು ರಸ್ತೆ ಹರಿದು ಬರುವ ಮಳೆನೀರೆಲ್ಲವೂ ಸತೀಶ್ ಸಮಗಾರಗುಂಡಿ ಅವರ ಬಂಗೇರ ನಿವಾಸದ ಎದುರು ಸಂಗ್ರಹಗೊಳ್ಳುತ್ತಿದೆಯಲ್ಲದೆ ಮಳೆ ನೀರು ಮನೆ ಮತ್ತು ಡ್ರೈ ಕ್ಲೀನ್ ಅಂಗಡಿಯ ಒಳಗೂ ಮುನ್ನುಗ್ಗುವ ಭೀತಿಯಿದೆ.
ರಸ್ತೆಯುದ್ದಕ್ಕೂ ಮಳೆನೀರು ಆವರಿಸಿರುವುದರಿಂದ ದ್ವಿಚಕ್ರ, ಸಹಿತ ಘನ ವಾಹನಗಳಿಗೂ ತೊಂದರೆಯಾಗುತ್ತಿದೆ.
ಸ್ಥಳೀಯರಾದ ಸತೀಶ್ ಬಂಗೇರಾ ಅವರು ಮಾಧ್ಯಮದೊಂದಿಗೆ ಮಾತನಾಡಿ ಈ ಹಿಂದೆಯೇ ಪುರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಸಮಪ೯ಕವಾಗಿ ಕೆಲಸ ನಿವ೯ಹಿಸಿಲ್ಲ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಸಂಕಷ್ಟಕ್ಕೆ ಪುರಸಭೆ ತಕ್ಷಣ ಸ್ಪಂದಿಸಿ, ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಸ್ತೆಯ ನೀರು ಆಟೋ ಪಾಕಿ೯ನ ಕಡೆಗೆ ಹರಿಯುತ್ತಿರುವುದರಿಂದ ವಾಹನಗಳು ಹೋಗುವಾಗ ನಮ್ಮ ಮೇಲೆ ಮತ್ತು ಪಾದಾಚಾರಿಗಳ ಮೇಲೆ ಬೀಳುತ್ತಿದೆ- ಹಿರಿಯ ಆಟೋ ಚಾಲಕ ಚಂದ್ರಶೇಖರ್.
ಮೂಡುಬಿದಿರೆಯ ಜ್ಯೋತಿನಗರ, ಗಾಂಧಿನಗರ, ಕೃಷ್ಣಕಟ್ಟೆ, ಸಮಗಾರ ಗುಂಡಿ ಬಳಿ ರಸ್ತೆಯಲ್ಲಿಯೇ ನೀರು ಹರಿಯುತ್ತಿರುವುದರಿಂದ ಆಟೋ ಚಾಲಕರಾದ ನಮಗೆ ತೊಂದರೆಯಾಗುತ್ತಿದೆಯಲ್ಲದೆ ಆಟೋಗಳಿಗೂ ಸಮಸ್ಯೆಯಾಗುತ್ತದೆ.
ಪುಟ್ ಪಾತನ್ನು ಅಂಗಡಿ ಮಾಲೀಕರು ಅತಿಕ್ರಮಣ ಮಾಡಿರುವುದರಿಂದ ಜನರಿಗೆ ಹೋಗಲು ದಾರಿ ಇಲ್ಲದಂತ್ತಾಗಿದೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಆಚಾಯ೯ ತಿಳಿಸಿದ್ದಾರೆ.
ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿರುವ ಬಗ್ಗೆ ಗಮನಕ್ಕೆ ತಂದಿದೆ. ಸಮಗಾರ ಗುಂಡಿ ಬಳಿಯ ಸಮಸ್ಯೆಯ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಿಗೆ ಒಂದು ವಾರದ ಹಿಂದೆಯೆ ಮಾಹಿತಿಯನ್ನು ನೀಡಲಾಗಿದೆ ಆದರೆ ಕೆಲಸಗಳು ಆರಂಭವಾಗಿಲ್ಲ.
ಪುರಸಭೆಯ ವತಿಯಿಂದ ಜೆಸಿಬಿ ಬಳಸಿ ಚರಂಡಿ ಕಾಮಗಾರಿಗಳನ್ನು ಆರಂಭಿಸಲಾಗುವುದು. ನೋ ಎಂಟ್ರಿಯಲ್ಲಿ ಅಮೃತ್ ಯೋಜನೆಯಡಿ ಮಾಡಿರುವ ಕಾಮಗಾರಿಗಳನ್ನು ಎರಡು ದಿನದಲ್ಲಿ ಸಮತಟ್ಟುಗೊಳಿಸಲಾಗುವುದು.
ಮುಂದಿನ ಒಂದು ವಾರದಲ್ಲಿ ಚರಂಡಿ ಕಾಮಗಾರಿಗಳನ್ನು ಮಾಡಿ ಮುಗಿಸಲಾಗುವುದು. ಜನರು ಕೂಡಾ ಚರಂಡಿಗಳಲ್ಲಿ ಕಸಗಳು ಬೀಳದಂತೆ ಜಾಗೃತೆ ವಹಿಸಬೇಕು : ಇಂದು ಎಂ. (ಪುರಸಭಾ ಮುಖ್ಯಾಧಿಕಾರಿ ಮೂಡುಬಿದಿರೆ)

