ದಲಿತ ಚಳುವಳಿಯ ಜೊತೆಗೆ ಕಮ್ಯುನಿಸ್ಟ್ ಚಳುವಳಿಯನ್ನು ಬೆಸುಗೆ ಹಾಕಿದ ದೇಶದ ಮೊದಲ ದಲಿತ ಕಮ್ಯುನಿಸ್ಟ್ RB ಮೋರೆಯವರ ಜೀವನ ಚರಿತ್ರೆ ನಿಜಕ್ಕೂ ರೋಮಾಂಚನಕಾರಿ ಅನುಭವ
ವರ್ಗ ಹೋರಾಟವನ್ನೇ ಪ್ರಧಾನ ಅಸ್ತ್ರವನ್ನಾಗಿಸಿದ ಕಮ್ಯುನಿಸ್ಟ್ ಪಕ್ಷಕ್ಕೆ ಜಾತಿ ತಾರತಮ್ಯ, ಅಸ್ಪ್ರಶ್ಯತೆಯ ಪ್ರಶ್ನೆಗಳನ್ನೂ ಕೂಡ ಮುನ್ನಲೆಗೆ ತರಲು ಸಾಧ್ಯವಾಗಬೇಕೆಂದು ಕಾಂ.ಮೋರೆಯವರು ಹಲವಾರು ಬಾರಿ ಪಕ್ಷಕ್ಕೆ ಮನವರಿಕೆ ಮಾಡಿಕೊಡುತ್ತಾರೆ.ಅದರ ಫಲವಾಗಿ ಕಮ್ಯುನಿಸ್ಟ್ ಪಕ್ಷವು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ.ರೈತ ಕಾರ್ಮಿಕರ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದ ಮೋರೆಯವರು ಪ್ರಾರಂಭದಲ್ಲಿ ವಿವಿಧ ವಿಭಾಗದ ಕಾರ್ಮಿಕರ ಸಂಘಗಳಲ್ಲಿ ಕೆಲಸ ನಿರ್ವಹಿಸುತ್ತಾ ಕಾರ್ಮಿಕ ನಾಯಕರಾಗುತ್ತಾರೆ.ದುಡಿಯುವ ವರ್ಗದ ಸಿದ್ದಾಂತವಾದ ಮಾರ್ಕ್ಸ್‌ವಾದವನ್ನು ಸರಿಯಾಗಿ ಅರ್ಥೈಸಿ ಅದೇ ದಾರಿಯಲ್ಲಿ ಮುನ್ನಡೆದರು.1945ರಲ್ಲಿ ಪ್ಯಾರಿಸಿನಲ್ಲಿ ಜರುಗಿದ ಅಂತರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸುವಂತಹ ಸುವರ್ಣಾವಕಾಶ ಮೋರೆಯವರಿಗೆ ದೊರೆಯಿತು. ಇದಕ್ಕೆ ಕಾರಣ ಡಾ.ಬಿ ಆರ್ ಅಂಬೇಡ್ಕರ್ ರವರು. ಭಾರತದಿಂದ ವಿವಿಧ ಕಾರ್ಮಿಕ ಸಂಘಟನೆಗಳಿಂದ ಭಾಗವಹಿಸುವವರ ಪಟ್ಟಿ ಅಂಬೇಡ್ಕರ್ ರವರ ಕೈ ಸೇರಿತು. ಅದರಲ್ಲಿ AITUC ಯಿಂದ ಆಯ್ಕೆಯಾದ ಇತರ 4 - 5 ಮಂದಿಯ ಹೆಸರಿತ್ತೇ ಹೊರತು ಮೋರೆಯವರ ಹೆಸರಿರಲಿಲ್ಲ. ಅಂಬೇಡ್ಕರ್ ರವರು ಕೂಡಲೇ ತನ್ನ ಅಧಿಕಾರವನ್ನು ಬಳಸಿ ಮೋರೆಯವರ ಹೆಸರನ್ನು AITUC ಪಟ್ಟಿಯಲ್ಲಿ ಸೇರಿಸಿದ್ದು ಎಲ್ಲರನ್ನೂ ಆಶ್ಚರ್ಯಗೊಳಿಸಿತು.ಅದಕ್ಕೆ ಪೂರಕವೆಂಬಂತೆ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಮೋರೆಯವರ ಭಾಷಣ ಅತ್ಯದ್ಭುತವಾಗಿತ್ತು. ಕಾರ್ಮಿಕರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ ಮೋರೆಯವರು ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಜಾತಿ ವ್ಯವಸ್ಥೆ ಅಸ್ಪ್ರಶ್ಯತೆ ಎಷ್ಟೊಂದು ಆಳವಾಗಿ ಬೇರೂರಿದೆ,ಅದರಿಂದ ಕೆಳವರ್ಗದ ಶೋಷಿತ ಸಮುದಾಯದ ಕಾರ್ಮಿಕರ ಬವಣೆಗಳನ್ನು ವಿವರಿಸಿದಾಗ ಇಡೀ ಸಭೆಯು ಸ್ತಬ್ದಗೊಳ್ಳುತ್ತದೆ. ಅಲ್ಲಿಯ ತನಕ ಇಂತಹ ವಿಚಾರಗಳನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಯಾರೂ ಮಾತಾಡಿರಲಿಲ್ಲ.ಬಳಿಕ ಮೋರೆಯವರ ಈ ಭಾಷಣ ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದ ಒಳಗೂ ಭಾರೀ ಸದ್ದು ಮಾಡುತ್ತದೆ.
ಮೊದಲೇ ಕಷ್ಟಜೀವಿಯಾಗಿ ಹುಟ್ಟಿ ಬೆಳೆದ ಮೋರೆಯವರು ದಲಿತ ಸಮುದಾಯಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸಿರುವುದು ಮಾತ್ರವಲ್ಲದೆ ದೇಶದ ಮೊದಲ ದಲಿತ ಕಮ್ಯುನಿಸ್ಟರಾಗಿ ದುಡಿಯುವ ವರ್ಗಕ್ಕಾಗಿ ಅರ್ಪಣಾ ಮನೋಭಾವದಿಂದ ತನ್ನ ಕೊನೆಯ ಉಸಿರಿರುವವರೆಗೂ ದುಡಿದಿರುವುದು ಇತಿಹಾಸ. ಮಾತ್ರವಲ್ಲ ಜೈಲುವಾಸ, ಭೂಗತ ಜೀವನದಂತಹ ಕಷ್ಟಕರ ಕಾಲದಲ್ಲೂ ತಾನು ನಂಬಿದ್ದ ಕಮ್ಯುನಿಸ್ಟ್ ಸಿದ್ದಾಂತಕ್ಕೆ ಬದ್ದರಾಗಿದ್ದರೇ ಹೊರತು ವಿಚಲಿತರಾಗಲಿಲ್ಲ.ತೀವ್ರ ಆರ್ಥಿಕ ಸಮಸ್ಯೆ, ಬಡತನದಿಂದಾಗಿ ತನ್ನ ಸಂಸಾರವೇ ಬೀದಿಪಾಲಾಗುವಂತಹ ಪರಿಸ್ಥಿತಿ ಬಂದರೂ, ತನ್ನೆರಡು ಮಕ್ಕಳನ್ನು ಕಳೆದುಕೊಂಡರೂ ಅವೆಲ್ಲವನ್ನೂ ಅತ್ಯಂತ ಧೈರ್ಯದಿಂದ ಎದುರಿಸಿದ್ದರು.
ಒಟ್ಟಿನಲ್ಲಿ ಕಾಮ್ರೇಡ್ ಮೋರೆಯವರ ಬದುಕು-ಜೀವನದ ಕಥೆಯನ್ನು ಅಲ್ಪಮಟ್ಟಿಗೆ ಸ್ವತಃ ಅವರೇ ಬರೆದಿದ್ದರೂ,ಉಳಿದ ವಿಚಾರಗಳನ್ನು ಅವರ ಮಗನಾದ ಸತ್ಯೇಂದ್ರ ಮೋರೆಯವರು ದಾಖಲಿಸುವ ಮೂಲಕ ನಿಜವಾದ ಅರ್ಥವನ್ನು ಕಲ್ಪಿಸಿದ್ದಾರೆ.ದಲಿತ ಚಳುವಳಿ,ಕಮ್ಯುನಿಸ್ಟ್ ಚಳುವಳಿ ಹಾಗೂ ಜನಪರವಾಗಿ ಚಿಂತಿಸುವ ಪ್ರತಿಯೊಂದು ಮನಸುಗಳು ಮೋರೆಯವರ ಜೀವನಚರಿತ್ರೆ ಪುಸ್ತಕವನ್ನು ಓದಲೇಬೇಕಾಗಿದೆ. ಎಂತಹ ಸಂಕಷ್ಟದ ಸಂದರ್ಭದಲ್ಲೂ ತಾನು ನಂಬಿದ್ದ ಸಿದ್ದಾಂತವನ್ನು ಹಾಗೂ ಶೋಷಿತ ಸಮುದಾಯವನ್ನು ಅತ್ಯಂತ ದೃಢವಾಗಿ ನಂಬುತ್ತಾ ಕೊನೆಯ ಉಸಿರಿನವರೆಗೂ ಸಾಮಾನ್ಯರಲ್ಲಿ ಅತೀ ಸಾಮಾನ್ಯರಾಗಿ ಬಾಳಿ ಬದುಕಿದ ಕಾಂ.ಮೋರೆಯವರು ಇಂದಿನ ಕಾಲಘಟ್ಟದಲ್ಲಿ ಬದಲಾವಣೆ ಬಯಸುವ ಮನಸುಗಳಿಗೆ ತೀರಾ ಹತ್ತಿರವಾಗುತ್ತಾರೆ ಎನ್ನುತ್ತಾರೆ ಸುನಿಲ್ ಕುಮಾರ್ ಬಜಾಲ್
