ಹೆಗ್ಗಡೆ ಅವಹೇಳನ-ಸೌಜನ್ಯ ಮಾವ ವಿಠ್ಠಲ್ ಗೌಡ ಬಂಧನಕ್ಕೆ ನ್ಯಾಯಾಲಯ ಆದೇಶ, ತೀವ್ರ ಶೋಧ
ಹೆಗ್ಗಡೆಯವರ ಬಗ್ಗೆ ಮತ್ತು ಕ್ಷೇತ್ರದ ಬಗ್ಗೆ ಅಗೌರವ ಮೂಡಿಸುವ ರೀತಿ ಹೇಳಿಕೆ ನೀಡಬಾರದೆಂದು 2023ರಲ್ಲಿ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಧರ್ಮಸ್ಥಳ ಪರವಾಗಿ ಶೀನಪ್ಪ ಮೂಲ್ಯ ನ್ಯಾಯಾಲಯಕ್ಕೆ ಅಪೀಲು ಮಾಡಿದ್ದು ಇದರಂತೆ ವಿಠಲ ಗೌಡ ಅವರಿಗೆ 30 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದೆ. ಇದರ ಬೆನ್ನಲ್ಲೇ ವಿಠಲ್ ಗೌಡ ತಲೆಮರೆಸಿಕೊಂಡಿದ್ದು ಜೂನ್ 30ರ ಒಳಗೆ ಬಂಧಿಸಿ ಕೋರ್ಟಿಗೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶ ಮಾಡಿದೆ.
ಇದರಂತೆ, ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಿಠಲ ಗೌಡ ಬಂಧನಕ್ಕೆ ವಾರಂಟ್ ಜಾರಿ ಮಾಡಿದೆ. ಬೆಳ್ತಂಗಡಿ ಮತ್ತು ಧರ್ಮಸ್ಥಳದ ಠಾಣೆಯ ಪೊಲೀಸರ ನೆರವಿನೊಂದಿಗೆ ವಿಠ್ಠಲ ಗೌಡ ಬಂಧನಕ್ಕಾಗಿ ಬೆಂಗಳೂರು ಕೋರ್ಟ್ ಪೊಲೀಸರು ಶೋಧ ನಡೆಸಿದ್ದಾರೆ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ವಿಠಲ ಗೌಡ ಕಳೆದ ನಾಲ್ಕು ತಿಂಗಳಿಂದ ಮನೆಗೆ ಬಾರದೆ ತಲೆಮರೆಸಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ವಿಠ್ಠಲ ಗೌಡ ಮನೆ, ಕುಸುಮಾವತಿ ನಿವಾಸಕ್ಕೆ ಕೋರ್ಟ್ ಅಧಿಕಾರಿಗಳ ಭೇಟಿ ನೀಡಿದ್ದು ವಾರಂಟ್ ಆದೇಶವನ್ನು ನೀಡಿದ್ದಾರೆ. ಉಜಿರೆ ಪರಿಸರದಲ್ಲಿ ವಿಠ್ಠಲ ಗೌಡ ಇರುವ ಬಗ್ಗೆ ಮಾಹಿತಿ ಆಧರಿಸಿ ದಿಢೀರ್ ಉಜಿರೆಗೆ ಆಗಮಿಸಿ ಶೋಧ ನಡೆಸಿದ್ದಾರೆ.