ಶಾಲೆ-ಕಾಲೇಜುಗಳು ಆರಂಭವಾಗಿ ತಿಂಗಳಾದರೂ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಆಗಿಲ್ಲ: ಆರೋಪ

ಶಾಲೆ-ಕಾಲೇಜುಗಳು ಆರಂಭವಾಗಿ ತಿಂಗಳಾದರೂ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಆಗಿಲ್ಲ: ಆರೋಪ


ಮಂಗಳೂರು: ಶಾಲೆ-ಕಾಲೇಜುಗಳು ಆರಂಭವಾಗಿ ತಿಂಗಳಾದರೂ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಆಗಿಲ್ಲ. ಇದರಿಂದ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ದೂರದ ಪ್ರದೇಶಗಳಿಂದ  ಬರುವ ವಿದ್ಯಾರ್ಥಿಗಳಿಗೆ ಹಾಗೂ ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಪ.ಜಾತಿ, ಪಂಗಡದ ಮುಖಂಡರು ಆರೋಪಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿಕಾನೂನು ಸುವ್ಯವಸ್ಥೆ ಡಿಸಿಪಿ ಮಿಥುನ್ ಎಚ್.ಎನ್. ಅವರ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪ.ಜಾತಿ - ಪ.ಪಂಗಡದವರ ಕುಂದುಕೊರತೆ ಸಭೆಯಲ್ಲಿ ಈ ಆರೋಪ ವ್ಯಕ್ತವಾಯಿತು. 

ವಿಚಾರ ಪ್ರಸ್ತಾಪಿಸಿದ ಎಸ್.ಪಿ.ಆನಂದ ಅವರು, ಶಾಲೆ ಆರಂಭದ ಸಂದರ್ಭದಲ್ಲೇ ಇಲಾಖೆಗಳು ಹಾಸ್ಟೆಲ್ ಸೌಕರ್ಯ ಕಲ್ಪಿಸುವ ಬಗ್ಗೆ ಪ್ರಯತ್ನ ಮಾಡದ ಪರಿಣಾಮ ಸಮುದಾಯದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಪಿಜಿಗಳಲ್ಲಿ ದುಬಾರಿ ದರ ತೆತ್ತು ನಿಲ್ಲುವಂತಾಗಿದೆ ಎಂದರು.

ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಸ್ಟೆಲ್ ಗಳ ಕೊರತೆ ಇದೆ.  ಎರಡು ಹೊಸ ಹಾಸ್ಟೆಲ್ ಬೇಕು ಎಂದು ಬೆಂಗಳೂರಿನ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಮಾಡುವ ಬಗ್ಗೆ ಅವಕಾಶ ಇರುವ ಬಗ್ಗೆ ಆನಂದ್ ಅವರು ಪ್ರಶ್ನಿಸಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿ ತಿಳಿಸಿದರು.

ಮಂಗಳೂರು ನಗರದಲ್ಲಿ ಫ್ಲೆಕ್ಸ್ ಹಾವಳಿ ಕಡಿಮೆಯಾಗಿದೆ. ಆದರೆ ಹೊರ ವಲಯ, ಗ್ರಾಮಾಂತರ ಭಾಗದಲ್ಲಿ ಇನ್ನೂ ಇದೆ. ಹೆದ್ದಾರಿಯ ಮಧ್ಯದಲ್ಲಿ ಕಟೌಟ್ ರೀತಿ ಅಳವಡಿಸುತ್ತಾರೆ. ಇದರಿಂದ ಅಪಾಯವಾಗುವ ಸಾಧ್ಯತೆಯೂ ಇದೆ. ಫ್ಲೆಕ್ಸ್ ಅಳವಡಿಸದಂತೆ ತಡೆಯಬೇಕು ಎಂದು ಗಿರೀಶ್ ಕುಮಾರ್ ಆಗ್ರಹಿಸಿದರು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳಿಗೆ ದೂರು ಕೊಡಿ, ಇಲಾಖೆಯಿಂದಲೂ ಪತ್ರ ಬರೆದು ತೆರವಿಗೆ ಸೂಚಿಸಲಾಗುವುದು ಎಂದು ಡಿಸಿಪಿ ರವಿಶಂಕರ್ ತಿಳಿಸಿದರು.

ಉಳ್ಳಾಲದಲ್ಲಿ ಸಚಿವರ ನಿರ್ದೇಶನದಂತೆ ಸಂಚಾರದಲ್ಲಿ ಕೆಲವೊಂದು ಮಾರ್ಪಾಡು ಮಾಡಿದ್ದಾರೆ. ಒಂದು ವಾರ ಎಲ್ಲ ಕಡೆ ಪೊಲೀಸ್ ಸಿಬಂದಿ ನಿಯೋಜಿಸಿದ್ದ ಕಾರಣ ಸಂಚಾರ ವ್ಯವಸ್ಥೆ ಸುಗಮವಾಗಿತ್ತು. ಆದರೆ ಕಾಪಿಕಾಡ್ ಕುಂಪಲ ಮೊದಲಾದೆಡೆಗಳಲ್ಲಿ ನೋ ಎಂಟ್ರಿ, ವನ್ ವೇ ಗಳಲ್ಲಿಯೇ ವಾಹನ ಸವಾರರು ಸಾಗುತ್ತಿದ್ದಾರೆ. ಆದ್ದರಿಂದ ಮತ್ತೆ ಪೊಲೀಸರನ್ನು ನಿಯೋಜಿಸಿ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಆಗ್ರಹಿಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದರು.

ನಗರದ ಲೇಡಿಗೋಷನ್ ಪ್ರದೇಶ, ರಥಬೀದಿ ಸೇರಿದಂತೆ ವಿವಿಧೆಡೆ ಫುಟ್ ಪಾತ್ ನಲ್ಲೇ ವ್ಯಾಪಾರ ಮಾಡುವುದರಿಂದ ಪಾದಚಾರಿಗಳಿಗೆ ಸಮಸ್ಯಯಾಗುತ್ತಿದೆ. ಕೆಲವು ಏಜೆಂಟ್ ಗಳು ವ್ಯಾಪಾರಿಗಳನ್ನು ರಸ್ತೆಯಲ್ಲಿ ವ್ಯಾಪಾರ ಮಾಡಿಸುತ್ತಿದ್ದಾರೆ. ಇವರನ್ನೆಲ್ಲ ತೆರವುಗೊಳಿಸಬೇಕು ಎಂದು ಆನಂದ್ ಆಗ್ರಹಿಸಿದರು. ಉತ್ತರಿಸಿದ ಡಿಸಿಪಿ ರವಿಶಂಕರ್ ಈ ಬಗ್ಗೆ ಪಾಲಿಕೆಗೆ ಪತ್ರ ಬರೆಯಾಲಾಗಿದೆ. ತೆರವುಗೊಳಿಸಲಿದ್ದಾರೆ ಎಂದರು.

ಜಿನ್ನಪ್ಪ ಬಂಗೇರ ಅವರು ಮಾತನಾಡಿ, ಜ್ಯೋತಿ ಅಂಬೇಡ್ಕರ್ ವೃತ್ತದಲ್ಲಿ ಈ ಹಿಂದೆ ಪೊಲೀಸ್ ಚೌಕಿಯಲ್ಲಿ ಅಂಬೇಡ್ಕರ್ ವೃತ್ತ ಎಂದು ಬರೆಯಲಾಗಿತ್ತು. ಆದರೆ ಪ್ರಸ್ತುತ ಹೊಸ ಪೊಲೀಸ್ ಚೌಕಿ ಅಳವಡಿಸಲಾಗಿದ್ದು, ಅಂಬೇಡ್ಕರ್ ವೃತ್ತದ ಉಲ್ಲೇಖವಿಲ್ಲ. ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು. ವಾಮಂಜೂರು ಜಂಕ್ಷನ್ ನಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆದ ಬಳಿಕ ಜನರಿಗೆ ರಸ್ತೆ ದಾಟುವುದು ತ್ರಾಸದಾಯಕವಾಗಿದೆ. ವಾರದಲ್ಲಿ 2-3 ಅಪಘಾತವೂ ಆಗುತ್ತಿದೆ. ಸ್ಥಳದಲ್ಲಿ ಪೊಲೀಸ್ ಸಿಬಂದಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ವಾಮಂಜೂರು ಜಂಕ್ಷನ್ ಬಳಿಯ ಬಳಿಯ ಮೈದಾನದಲ್ಲಿ ತಡರಾತ್ರಿ ವರೆಗೆ ಕ್ರಿಕೆಟ್ ಆಡುತ್ತಾ, ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ಇತ್ತೀಚೆಗೆ ಬೈಕ್ ನ ಲೈಟ್ ಬಿತ್ತು    ಎನ್ನುವ ಕಾರಣಕ್ಕೆ ಅಮಾಯಕ ಯುವಕನಿಗೆ  ಕ್ರಿಕೆಟ್ ಆಡುತ್ತಿದ್ದವರು ಹಲ್ಲೆ ಮಾಡಿದ್ದಾರೆ ಎಂದು ಆನಂದ್ ತಿಳಿಸಿದರು. ಉತ್ತರಿಸಿ ಎಸಿಪಿ ಶ್ರೀಕಾಂತ್, ಹಲ್ಲೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಡಿಸಿಪಿ ಮಿಥುನ್ ಅವರು ಭರವಸೆ ನೀಡಿದರು.

ಕರಾವಳಿ ವೃತ್ತ- ಪಂಪ್ ವೆಲ್ ನಡುವಿನ ರಸ್ತೆ ಕಾಮಗಾರಿಯ ಇನ್ನೊಂದು ಭಾಗದ ಕೆಲಸ ಆರಂಭವಾಗಿದ್ದು, ರಸ್ತೆ ತಡೆ ಮಾಡಿದ್ದಾರೆ.  ಇದರಿಂದ ಪಕ್ಕದ ಕುದ್ಕೋರಿಗುಡ್ಡದ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಹಿರಿಯ ನಾಗರಿಕರು, ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅನಿಲ್ ಕುಮಾರ್ ಆಗ್ರಹಿಸಿದರು.

ಎಸಿಪಿ ಶ್ರೀಕಾಂತ್, ರವೀಶ್ ನಾಯಕ್,  ವಿಜಯಕ್ರಾಂತಿ, ವಿವಿಧ ಠಾಣೆಗಳ ನಿರೀಕ್ಷರು, ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಪಣಂಬೂರು ಠಾಣಾ ನಿರೀಕ್ಷಕ ಸಲೀಂ ಅಬ್ಬಾಸ್ ಪಾನಲಾ ವರದಿ ವಾಚಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article