ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಭೇಟಿ: ದೇವಿಗೆ 1.6 ಕೆಜಿ ಬೆಳ್ಳಿ ಖಡ್ಗ ಸಮರ್ಪಣೆ

ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ಭೇಟಿ: ದೇವಿಗೆ 1.6 ಕೆಜಿ ಬೆಳ್ಳಿ ಖಡ್ಗ ಸಮರ್ಪಣೆ


ಕುಂದಾಪುರ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಚಂದ್ರಶೇಖರ್ ಜೋಸೆಫ್‌ ವಿಜಯ್‌ ಅವರು, ಇಂದು ಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ಸಾಂಪ್ರದಾಯಿಕ ಸ್ವಾಗತ ಹಾಗೂ ಶಿಷ್ಟಾಚಾರ ಪಾಲನೆ:

​ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿಗಳನ್ನು ಆಡಳಿತ ಮಂಡಳಿಯ ಟ್ರಸ್ಟಿಗಳು ಹೂಗುಚ್ಛ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಅರ್ಚಕ ವೃಂದದವರು ಮಂತ್ರಘೋಷಗಳೊಂದಿಗೆ  ಅವರನ್ನು ಕ್ಷೇತ್ರದೊಳಗೆ ಬರಮಾಡಿಕೊಂಡರು. ದೇವಸ್ಥಾನದ ಧಾರ್ಮಿಕ ನಿಯಮಾವಳಿಗಳಿಗೆ ಗೌರವ ಸೂಚಿಸಿದ ಸಿಎಂ ವಿಜಯ್‌ ಅವರು, ಸಾಂಪ್ರದಾಯಿಕ ಶಲ್ಯ ಧರಿಸುವ ಮೂಲಕ ಕ್ಷೇತ್ರದ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಿದರು.


ವಿಶೇಷ ಕಾಣಿಕೆ ಮತ್ತು ಮಹಾಪೂಜೆ:

​ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ಜರುಗಿದವು. ಮುಖ್ಯಮಂತ್ರಿ ವಿಜಯ್‌ ಅವರು ಶಕ್ತಿ ದೇವಿ  ಮೂಕಾಂಬಿಕೆಗೆ  ರೇಷ್ಮೆ ಸೀರೆ, ಫಲ-ತಾಂಬೂಲಗಳನ್ನು ಅರ್ಪಿಸಿ, ಸುಮಾರು ಅರ್ಧ ಗಂಟೆಗಳ ಕಾಲ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ತಮ್ಮ ರಾಜಕೀಯ ಹಾಗೂ ವೈಯಕ್ತಿಕ 'ವಿಜಯ'ದ ಪ್ರತೀಕವಾಗಿ ದೇವಿಗೆ 1 ಕೆಜಿ 600 ಗ್ರಾಂ ತೂಕದ ಭವ್ಯ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದರು. 

​​ಅಭಿಮಾನಿಗಳ ಜಮಾವಣೆ-ಭದ್ರತಾ ಸಿಬ್ಬಂದಿ ಹರಸಾಹಸ:

ವಿಜಯ್ ರ ಅಭಿಮಾನಿಗಳು ಕರ್ನಾಟಕ, ಕೊಲ್ಲೂರಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ​ತಮ್ಮ ನೆಚ್ಚಿನ ನಟ ಹಾಗೂ ನೆರೆಯ ರಾಜ್ಯದ ಮುಖ್ಯಮಂತ್ರಿಯನ್ನು ನೋಡಲು ದೇವಸ್ಥಾನದ ಆವರಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಾರ್ವಜನಿಕರು ಜಮಾಯಿಸಿದ್ದರು. ವಿಜಯ್ ರವರ ವಾಹನ ಸಮೀಪಿಸುತ್ತಿದ್ದಂತೆಯೇ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು. ಅಭಿಮಾನಿಗಳೆಡೆಗೆ ವಿಜಯ್ ಮುಗುಳ್ನಕ್ಕು ಕೈ ಬೀಸಿದರು. ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಮುಖ್ಯಮಂತ್ರಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಹಾಗೂ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಸಾಕಷ್ಟು ಶ್ರಮಪಡಬೇಕಾಯಿತು. ಪೂಜಾ ವಿಧಿವಿಧಾನಗಳ ಮುಕ್ತಾಯದ ನಂತರ ಮುಖ್ಯಮಂತ್ರಿ ವಿಜಯ್‌ ಅವರು ಕೊಲ್ಲೂರಿನಿಂದ ನಿರ್ಗಮಿಸಿದರು.

ಇದೊಂದು ಖಾಸಗಿ ಭೇಟಿಯಾದ್ದರಿಂದ ಯಾವುದೇ ಸಭೆ, ಭಾಷಣಗಳು ಇರಲಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article