ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ ಪತ್ತೆ
ಕುಂದಾಪುರ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದು ಬ್ರಹ್ಮಾವರದಲ್ಲಿ ಬೆಳಕಿಗೆ ಬಂದಿದ್ದು, 13 ಕ್ವಿಂಟಲ್‌ಗೂ ಅಧಿಕ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾರಂಬಳ್ಳಿ ಗ್ರಾಮದ ಆಕಾಶವಾಣಿ ಸಮೀಪ ವಾಹನ ತಪಾಸಣೆ ನಡೆಸುವ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಅಕ್ಕಿ ಸಾಗಾಟ ಮಾಡಲಾಗುತ್ತಿರುವುದು ಪತ್ತೆಯಾಗಿತ್ತು.
ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳು KA-20-AA-9700 ಸಂಖ್ಯೆಯ ಗೂಡ್ಸ್ ರಿಕ್ಷಾವನ್ನು ಪರಿಶೀಲಿಸಿದಾಗ, ವಾಹನದ ಹಿಂಭಾಗದಲ್ಲಿ 39 ಚೀಲಗಳಲ್ಲಿ ಒಟ್ಟು 13 ಕ್ವಿಂಟಲ್ 92 ಕೆ.ಜಿ 300 ಗ್ರಾಂ ಅಕ್ಕಿ ಸಂಗ್ರಹಿಸಲಾಗಿರುವುದು ಕಂಡುಬಂದಿದೆ. ವಿಚಾರಣೆಯ ವೇಳೆ ಈ ಅಕ್ಕಿಯು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುವ ಪಡಿತರ ಅಕ್ಕಿ ಎಂಬುದು ದೃಢಪಟ್ಟಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.