ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ
Tuesday, June 9, 2026
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇಲ್ಲಿ ವಿಶ್ವ ಪರಿಸರ ದಿನವನ್ನು ಕಾಲೇಜಿನ ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗಗಳು ಮತ್ತು ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆಯಿತು.
ಎಸ್‌ವಿಎಸ್ ಕಾಲೇಜು, ಬಂಟ್ವಾಳದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರೂ, ವಿಭಾಗಾಧ್ಯಕ್ಷರೂ ಆದ ಡಾ. ವಿನಾಯಕ ಕೆ.ಎಸ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದಿಂದ ಉಂಟಾಗುತ್ತಿರುವ ಸವಾಲುಗಳನ್ನು ವಿವರಿಸಿ, ಪರಿಸರ ಸಂರಕ್ಷಣೆಗೆ ಶಾಶ್ವತ ಅಭಿವೃದ್ಧಿ ಅತ್ಯಾವಶ್ಯಕವೆಂದು ಹೇಳಿ, ಮೈಕ್ರೋಪ್ಲಾಸ್ಟಿಕ್ ಎಂಬ ಗಂಭೀರ ಮತ್ತು ಹೆಚ್ಚಾಗಿ ಗಮನಕ್ಕೆ ಬಾರದ ಪರಿಸರ ಸಮಸ್ಯೆಯ ಕುರಿತು ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಹೆಚ್ಚುತ್ತಿರುವ ಭೌತಿಕ ಮನೋಭಾವಗಳು ಯುವಪೀಳಿಗೆ ಮೇಲೆ ದುಷ್ಪರಿಣಾಮ ಬೀರುತ್ತಿರುವುದಾಗಿ ಎಚ್ಚರಿಸಿ, ಸಂಪತ್ತಿಗಿಂತ ಜೀವನ ಮೌಲ್ಯಗಳಿಗೆ ಆದ್ಯತೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿ, ಸಾಲುಮರದ ತಿಮ್ಮಕ್ಕ ಅವರಂತಹ ಮಹನೀಯರಿಂದ ಪ್ರೇರಣೆ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮಕ್ಕೆ ವಿಶೇಷ ಅರ್ಥ ತುಂಬುವಂತೆ, ಸಂದೀಪ್ ಶೆಟ್ಟಿ ಅರಿಯಡ್ಕ ಅವರು RR-38 ಜಾತಿಯ ಹಲಸು ಸಸಿಯನ್ನು ದೇಣಿಗೆಯಾಗಿ ನೀಡಿದ್ದು, ಅದನ್ನು ಕಾಲೇಜು ಆವರಣದಲ್ಲಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ಅವರು ಸಕ್ರಿಯವಾಗಿ ಭಾಗವಹಿಸಿದರು. ಕಾರ್ಯಕ್ರಮವನ್ನು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಶಿಪ್ರಭಾ ಬಿ. ಅವರು ಹಾಗೂ ಇಕೋ ಕ್ಲಬ್ ಸಂಯೋಜಕಿ ಸ್ಮಿತಾ ವಿವೇಕ್ ಅವರು ಸಂಯೋಜಿಸಿದರು.
ರಚನಾ ಮತ್ತು ಅಖಿಲಾ ಅವರು ಪ್ರಾರ್ಥನೆ ನೆರವೇರಿಸಿದರು. ನಿಫಾನಾ ಸ್ವಾಗತ ಹಾಗೂ ಯಜ್ಞೇಶ್ ವಂದಿಸಿದರು. ಕಾರ್ಯಕ್ರಮವನ್ನು ಹಿಬಾ ಶೇಖ್ ನಿರ್ವಹಿಸಿದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹಸಿರು ಪರಿಸರ ನಿರ್ಮಾಣದತ್ತ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.




