ಮನೆಗೆ ನುಗ್ಗಿ ನಗ-ನಗದು ಕಳವು ಪ್ರಕರಣ: ಅಂತರಾಜ್ಯ ಚೋರರಿಬ್ಬರ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿ, ಪುಂಜಾಲಕಟ್ಟೆ ಪೊಲೀಸರು ಸುಮಾರು 68.690 ಗ್ರಾಂ. ಚಿನ್ನಾಭರಣ ಹಾಗೂ 2 ಲಕ್ಷ ರೂ ನಗದು ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ 21.810 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮಾರುತಿ ಸ್ವಿಫ್ಟ್ ಕಾರನ್ನು ಆರೋಪಿಗಳಿಂದ ವಶಪಡಿಸಿದ್ದಾರೆ. ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 20,67 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನಿವಾಸಿ ಡಿ. ಮುರಳಿ ಅವರ ಮನೆಯಲ್ಲಿ ಏ.5ರಂದು ಮನೆಗೆ ನುಗ್ಗಿದ ಕಳ್ಳರು ಮನೆಯ ಮುಂಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ ಕಪಾಟಿನ ಲಾಕ್ ಮುರಿದು ಚಿನ್ನಾಭರಣ ಮತ್ತು ಹಣವನ್ನು ಕಳವುಗೈದು ಪರಾರಿಯಾಗಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದ್ದು, ಮೇ.15ರಂದು ಆರೋಪಿ ಹಮೀದ್ ಎಂಬಾತವನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈತ ನೀಡಿದ ಮಾಹಿತಿಯಂತೆ ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿ ಅಬ್ದುಲ್ ಜಾಬೀರ್ ಎಂಬಾತನನ್ನು ಬಂಧಿಸಲಾಗಿತ್ತು,
ಬಳಿಕ ಆರೋಪಿಗಳಿಂದ ಒಟ್ಟು ಮೌಲ್ಯ 20,67,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳು ಕೇರಳ ರಾಜ್ಯದಲ್ಲಿ ಹಾಗೂ ದ.ಕ ಜಿಲ್ಲೆಯ ಉಪ್ಪಿನಂಗಡಿ, ಬೆಳ್ತಂಗಡಿ ಹಾಗೂ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿಯುತ್ತದೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್ ಭೂಮಾರೆಡ್ಡಿರವರ ಮಾರ್ಗದರ್ಶನದಂತೆ ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ ರವರ ನೇತ್ರತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಉಪ್ಪಿನಂಗಡಿ ಗ್ರಾಮಾಂತರ ಸಿ.ಪಿ.ಐ ನಾಗರಾಜ್ ಹೆಚ್.ಇ, ಪುಂಜಾಲಕಟ್ಟೆ ಠಾಣಾ ಪಿ.ಎಸ್.ಐ ರಾಜೇಶ್ ಕೆ.ವಿ, ಸಿಬ್ಬಂದಿಗಳಾದ ಏ.ಎಸ್.ಐ ಬೆನ್ನಿಚ್ಚನ್, ಏ.ಎಸ್.ಐ ಸುಂದರ ಶೆಟ್ಟಿ, ಏ.ಎಸ್.ಐ ವಿಶ್ವನಾಥ್ ನಾಯ್ಕ್, ಪ್ರವೀಣ್ ಮೂರುಗೋಳಿ, ರಾಜೇಶ್ ಎನ್, ವಿಜಯ್ ಕುಮಾರ್ ರೈ, ರಾಹುಲ್ ರಾವ್, ಸಂತೋಷ್, ಬಸವರಾಜ್, ರಜಿತ್, ನಾಗರಾಜ್ ಅವರು ಈ ಕಳವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರು ಈ ಕಾರ್ಯಾಚರಣೆಗೆ ಸಹಕರಿಸಿದ್ದರು.
