ಕೋಟೇಶ್ವರ ಅಂಡರ್‌ಪಾಸ್ ಬಳಿ ಭೀಕರ ಅಪಘಾತ: ಬೈಕ್​ಗೆ ಕಂಟೇನರ್ ಲಾರಿ ಡಿಕ್ಕಿ-ಯುವ ಕಾರ್ಮಿಕ ಸ್ಥಳದಲ್ಲೇ ಮೃತ್ಯು

ಕೋಟೇಶ್ವರ ಅಂಡರ್‌ಪಾಸ್ ಬಳಿ ಭೀಕರ ಅಪಘಾತ: ಬೈಕ್​ಗೆ ಕಂಟೇನರ್ ಲಾರಿ ಡಿಕ್ಕಿ-ಯುವ ಕಾರ್ಮಿಕ ಸ್ಥಳದಲ್ಲೇ ಮೃತ್ಯು


ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಕೋಟೇಶ್ವರ ಅಂಡರ್‌ಪಾಸ್ ಸಮೀಪ ಸೋಮವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಮಾರ್ಕೋಡು ನಿವಾಸಿ ಪ್ರದೀಪ್ ಪೂಜಾರಿ (38) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಅವರು ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಸಂಜೆ ವೇಳೆ ಹಾಲಾಡಿ ರಸ್ತೆಯಿಂದ ಕೋಟೇಶ್ವರ ಪೇಟೆಯ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಉಡುಪಿ ಕಡೆಯಿಂದ ಬಂದಿದ್ದ 10 ಚಕ್ರದ ಬೃಹತ್ ಕಂಟೇನರ್ ಲಾರಿಯು ಸರ್ವಿಸ್ ರಸ್ತೆಯ ಮೂಲಕ ಅಂಡರ್‌ಪಾಸ್ ಬಳಿ ಯು-ಟರ್ನ್ ಪಡೆಯುವ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ನ್ನು ಗಮನಿಸದೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ಬೈಕ್ ಸವಾರ ಪ್ರದೀಪ್ ಪೂಜಾರಿ ಲಾರಿಯ ಅಡಿಗೆ ಸಿಲುಕಿದ್ದು, ಗಂಭೀರ ಗಾಯಗಳೊಂದಿಗೆ ತೀವ್ರ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಕ್ಷಣ ಸಾರ್ವಜನಿಕರು ನೆರವಿಗೆ ಧಾವಿಸಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಸಂಚಾರಿ ಠಾಣೆಯ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article