ಜೂ.12ರಿಂದ ಕುಡ್ಲ ಪೆಲಕಾಯಿ ಪರ್ಬ
ಮಂಗಳೂರು: ಹನಿ ಜೆನಿಕ್ಸ್ ವತಿಯಿಂದ ಜೂ. 12ರಿಂದ 14ರವರೆಗೆ ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಅಡಿಟೋರಿಯಂನಲ್ಲಿ ಕುಡ್ಲ ಪೆಲಕಾಯಿ ಪರ್ಬ ಆಯೋಜಿಸಲಾಗಿದೆ.
ಬೆಳಗ್ಗೆ 9.30ರಿಂದ ರಾತ್ರಿ 8.30ರವರೆಗೆ ಈ ಪರ್ಬ ನಡೆಯಲಿದ್ದು, ಮಳಿಗೆಗಳ ಉದ್ಘಾಟನೆ ಜೂ. 12ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಪರ್ಬದ ಸಂಯೋಜಕ ಅಶ್ವಿನ್ ಸಿಕ್ವೇರಾ ಬರಿಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಲಸು ಬೆಳೆಗಾರ ರೈತರಿಗೆ ನೇರ ಮಾರುಕಟ್ಟೆ ಮತ್ತು ಉತ್ತಮ ಮಾರಾಟ ಅವಕಾಶ ಕಲ್ಪಿಸುವುದು ಹಬ್ಬದ ಪ್ರಮುಖ ಉದ್ದೇಶವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲಸಿನ ವಿವಿಧ ತಳಿಯ ಹಣ್ಣುಗಳು ಮಾರಾಟಕ್ಕೆ ಲಭ್ಯ ಇರಲಿದೆ. ಹಲಸಿನಿಂದ ತಯಾರಿಸಿದ ವಿವಿಧ ಆಹಾರ ಪದಾರ್ಥಗಳು, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಹಲಸಿನ ಗಿಡಗಳಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ರೈತರ ಉತ್ಪನ್ನಗಳು, ಕಿರು ಉದ್ಯಮಿಗಳ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ವಿಶೇಷ ಮಳಿಗೆಗಳು ಇರಲಿವೆ. ದ.ಕ., ತುಮಕೂರು, ಚಿಕ್ಕಬಳ್ಳಾಪರು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ. ಕೊಡಗು ಜಿಲ್ಲೆಯ ಪ್ರಸಿದ್ಧ ಬೆಣ್ಣೆ ಹಣ್ಣು ಹಾಗೂ ರಾಮನಗರ ಜಿಲ್ಲೆಯ ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳು ಗ್ರಾಹಕರಿಗೆ ಲಭ್ಯವಾಗಲಿವೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಬೆಳೆಯುವ ರಂಬುತಾನ್, ಡ್ರ್ಯಾಗನ್ ಫ್ರೂಟ್, ಫುಲಾಸಾನ್, ಮ್ಯಾಂಗೋಸ್ಟಿನ್ ಸೇರಿದಂತೆ ವಿವಿಧ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ ಎಂದು ಹೇಳಿದರು.
ಕಳೆದ ವರ್ಷ 60 ಮಳಿಗೆಗಳಿದ್ದು, ಈ ವರ್ಷ 80 ಮಳಿಗೆಗಳು ಇರಲಿವೆ. ಮಕ್ಕಳಿಗಾಗಿ ಚಿತ್ರಕಲೆ, ಸ್ಪರ್ಧೆ ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ವಿಶೇಷ ಸ್ಪರ್ಧೆ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಇರಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಿಯಾನ್ ಮೊನಿಸ್, ಭಾಸ್ಕರ ರೈ ಕಟ್ಟ, ಜಾಕ್ಸನ್ ಸಲ್ಡಾನ, ಶೆಲ್ಡನ್ ಕ್ರಾಸ್ತಾ ಉಪಸ್ಥಿತರಿದ್ದರು.