‘ಕಾವ್ಯಾಂ ವ್ಹಾಳೊ-15’ ಕೊಂಕಣಿ ಕವಿಗೋಷ್ಟಿ
ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕೊಂಕಣಿ ಸಂಗೀತ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ನಾಟಕ ಕ್ಷೇತ್ರದಲ್ಲಿ ಹಾಗೂ ಇತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೊಂಕಣಿ ಸಮುದಾಯದ ವ್ಯಕ್ತಿಗಳನ್ನು ಗುರುತಿಸಿ, ಅವರ ಕಾರ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗಾಗಿ ಸನ್ಮಾನಿಸುವ ಕೆಲಸವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ ಎಂದು ಹೇಳಿದರು.
ಮುಖ್ಯ ಅಥಿತಿ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ವಿಜಯಲಕ್ಷ್ಮೀ ನಾಯಕ್ ಮಾತಾನಾಡಿ, ಕೊಂಕಣಿ ಒಂದು ಮಹಾನ್ ಭಾಷೆ. ಭಾರತದ ಪ್ರಮುಖ ಧರ್ಮಗಳಾದ ಹಿಂದು, ಮುಸ್ಲಿಂ, ಕೈಸ್ತ ಸಮದಾಯಗಳ ಜನರು ಮಾತಾನಾಡುವ ಭಾಷೆ. ಐದು ಲಿಪಿಗಳಲ್ಲಿ ಬರೆಯುವ ಭಾಷೆಯಾಗಿದೆ. ಹಾಗಾಗಿ ಕೊಂಕಣಿ ಭಾಷೆಯು ಬಹಳಷ್ಟು ಅನನ್ಯತೆಯನ್ನು ಹೊಂದಿರುವ ಭಾಷೆಯಾಗಿ ಉಳಿದಿದೆ. ಕೊಂಕಣಿಯು ಭಾರತದ ಸಂವಿಧಾನದ ೮ನೇ ಪರಿಚ್ಛೇದಲ್ಲಿದ್ದು, ಭಾರತದ ಅಧಿಕೃತವಾಗಿ ಮಾನ್ಯತೆ ಪಡೆದ ಭಾಷೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಕೊಂಕಣಿಯ ಶ್ರೀಮಂತಿಕೆಯನ್ನು ಕೊಂಡಾಡಿದರು.
ಕೊಂಕಣಿ ಅಕಾಡೆಮಿ ಸನ್ಮಾನವನ್ನು ಸ್ವೀಕರಿಸಿ ಮಾತಾನಾಡಿದ ಡೆಪ್ಯೂಟಿ ಚೀಫ್ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ಅವರು ‘ಜಾತಿ ಧರ್ಮ ಮನೆಯಲ್ಲಿರಲಿ, ದೇವರು ಹೃದಯದಲ್ಲಿರಲಿ, ಈ ಜೀವ ಈ ಭೂಮಿಗೆ ಬೆಳಕಾಗಿರಲಿ’ ಎಂದು ಶುಭಕೋರಿ ಈ ಲೋಕದಲ್ಲಿ ಜನಿಸಿದ ಮೇಲೆ ಸಮಾಜಕ್ಕೆ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಿ, ಬೇರೆಯವರಿಗೆ ಉಪಕಾರಿಯಾಗಿರಬೇಕೆಂದು ಕರೆಕೊಟ್ಟರು.
ಖ್ಯಾತ ಕವಯಿತ್ರಿಯಾದ ಫೆಲ್ಸಿ ಲೋಬೊ ದೆರೆಬಯಲ್ಲು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ವಲೇರಿಯನ್ ಮೊರಾಸ್ ತಾಕೊಡೆ, ಸ್ಮಿತಾ ಶೆಣೈ, ರೆಮಿ ಕಾಟಿಪಳ್ಳ, ಡಾ. ಫ್ಲಾವಿಯಾ ಕ್ಯಾಸ್ತೆಲಿನೊ, ಅನಿಲ್ ಜೆ. ಕುವೆಲ್ಲೊ, ರಾಧಿಕ ಪೈ, ಪೆದ್ರು ಪ್ರಭು ತಾಕೊಡೆ, ಮರ್ಲಿನ್ ಮಸ್ಕರೇನ್ಹಸ್, ಅಲ್ರೀಶಾ ರೊಡ್ರಿಗಸ್ ಮತ್ತು ಲವೀನ ದಾಂತಿ ಇವರು ತಮ್ಮ ಕವಿತೆಗಳನ್ನು ವಾಚಿಸಿದರು.
ಅಕಾಡೆಮಿ ಸದಸ್ಯೆ ಸಪ್ನಾ ಮೇ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯ ನವೀನ್ ಲೋಬೊ ಉಪಸ್ಥಿತರಿದ್ದರು.