ರಾಜ್ಯ ಸರ್ಕಾರದ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಕ್ಷೇಪ: ಕಾನೂನಿನ ಆಳ್ವಿಕೆ ಹಾಗೂ ನ್ಯಾಯಾಂಗದ ಸ್ವಾಯತ್ತತೆ ರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ
ದಂಡ ಪ್ರಕ್ರಿಯಾ ಸಂಹಿತೆಯ ಕಲಂ 321 ಸರ್ಕಾರಕ್ಕೆ ಅನಿಯಂತ್ರಿತ ಅಥವಾ ರಾಜಕೀಯ ಉದ್ದೇಶಪೂರಿತ ಅಧಿಕಾರವನ್ನು ನೀಡವುದಿಲ್ಲ ಎಂದು ಸಮಿತಿ ನೆನಪಿಸಿದೆ. ಸಾರ್ವಜನಿಕ ಅಭಿಯೋಜಕರು ಸರ್ಕಾರದ ಕೇವಲ ಪ್ರತಿನಿಧಿಗಳಲ್ಲ, ಅವರು ನ್ಯಾಯಾಲಯದ ಅಧಿಕಾರಿಗಳಾಗಿದ್ದು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕೆಂಬ ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನ ವಿವಿಧ ತೀರ್ಪುಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಸಚಿವ ಸಂಪುಟದ ನಿರ್ಧಾರವನ್ನು ತಕ್ಷಣವೇ ಜಾರಿಗೆ ತರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಅಭಿಯೋಜಕರ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆ ಯಾವುದೇ ರಾಜಕೀಯ ಒತ್ತಡ ಹೇರಬಾರದು ಮತ್ತು ಕಾನೂನು ಜಾರಿಯ ಸಿಬ್ಬಂದಿಗಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಮುಂದುವರಿಸಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯ ಸರ್ಕಾರವು ರಾಜಕೀಯ ಹಿತಾಸಕ್ತಿಗಿಂತ ಮಿಗಿಲಾಗಿ ನ್ಯಾಯ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲಿದೆ ಎಂಬ ವಿಶ್ವಾಸವನ್ನು ಸಮಿತಿ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ದಿನಕರ್ ಬಜಾಲ್, ಸುರೇಂದ್ರ ಜಪ್ಪಿನಮೊಗರು, ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷ ಲೋಹಿತ್ ಕುಮಾರ್ ಸುವರ್ಣ, ನ್ಯಾಯವಾದಿ ಜ್ಯೋತಿ ಗೌಡ, ಹಿಂದುತ್ವವಾದಿಗಳಾದ ರಾಜಗೋಪಾಲ್ (ರಾಜ ಗೋವಿಂದ), ಪ್ರಕಾಶ್ ಬಜಾಲ್, ಜಯಪ್ರಕಾಶ್ ಬಜಾಲ್, ಭಾಸ್ಕರ ಆಚಾರ್ಯ, ಭಾಸ್ಕರ ಕೊಳ್ನಾಡು, ವಿಠಲ್ ನಾಯಕ್, ಚಂದ್ರಕಾಂತ್ ಕಾಮತ್, ಗಿರಿಧರ್ ಪೆರ್ಜಿಲ, ಸಂತೋಷ್, ನಿತಿನ್ ಅತ್ತಾವರ, ಪ್ರಕಾಶ್ ಪ್ರಧಾನ್, ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ, ರಾಜೇಶ್ ಆಚಾರ್ಯ ಸೇರಿದಂತೆ ಹಲವು ಹಿಂದುತ್ವನಿಷ್ಟರು ಉಪಸ್ಥಿತರಿದ್ದರು.
