ರಾಮಕೃಷ್ಣ ಮಿಷನ್‌ನಿಂದ ತಿಂಗಳ ಸ್ವಚ್ಛ ಮಂಗಳೂರು ಅಭಿಯಾನ
Sunday, June 7, 2026
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಜೂನ್ ತಿಂಗಳ ಮಾಸಿಕ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಪರಿಸರದಲ್ಲಿ ಸಿ.ಎಸ್.ಐ. ಸೇಂಟ್ ಪಾಲ್ಸ್ ಇಂಗ್ಲಿಷ್ ಚರ್ಚ್‌ನ ಪಾಸ್ಟರೇಟ್ ಅಬ್ರಹಾಂ ವಿನಯಲಾಲ್ ಬಂಗೇರ ಹಾಗೂ ಭಾರತೀಯ ಸೇನೆಯ ನಿವೃತ್ತ ಯೋಧ ಗೋಪಿನಾಥ ರಾವ್ ಅವರು ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು.
ಅಬ್ರಹಾಂ ವಿನಯಲಾಲ್ ಬಂಗೇರ ಮಾತನಾಡಿ, ಸ್ವಚ್ಛತೆ ದೈವತ್ವದ ಸಮೀಪ ಮಾರ್ಗ. ನಾವು ಆಂತರಿಕ ಮತ್ತು ಬಾಹ್ಯ ಸ್ವಚ್ಛತೆ ಎರಡಕ್ಕೂ ಸಮಾನ ಮಹತ್ವ ನೀಡಬೇಕು. ಬಾಹ್ಯ ಸ್ವಚ್ಛತೆ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಹಕಾರಿಯಾಗಿದ್ದರೆ, ಆಂತರಿಕ ಸ್ವಚ್ಛತೆ ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ರೂಪಿಸುತ್ತದೆ. ಮಂಗಳೂರನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ರಾಮಕೃಷ್ಣ ಮಿಷನ್ ಹಾಗೂ ಎಲ್ಲಾ ಸ್ವಯಂಸೇವಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಶ್ರಮದಾನದ ಅಂಗವಾಗಿ ಹಿರಿಯ ಸ್ವಯಂಸೇವಕರಾದ ಪದ್ಮನಾಭ ಸಾಲ್ಯಾನ್, ರಾಘವೇಂದ್ರ, ರಾಜೀವಿ ಚಂದ್ರಶೇಖರ್, ವಿಠ್ಠಲದಾಸ್ ಪ್ರಭು, ಕಮಲಾಕ್ಷ ಪೈ, ಸುನಂದ ಶಿವರಾಮ್, ರಾಜು, ದಾಮೋದರ ಭಟ್, ಅಹಲ್ಯಾ ಭಟ್, ಅದ್ವಿಕ್, ನಾಗೇಶ್ ಹಾಗೂ ಸುಕುಮಾರ್ ಸಾಲ್ಯಾನ್ ಅವರ ತಂಡವು ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣದ ಸುತ್ತಮುತ್ತಲಿನ ಕಾಲುದಾರಿಗಳು ಹಾಗೂ ಪ್ರಯಾಣಿಕರ ನಿರೀಕ್ಷಣಾ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು.
ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದ ಕಾರಣ ಆವರಣದ ಹಲವಾರು ಗೋಡೆಗಳು ಅಶುಚಿಗೊಂಡಿರುವುದನ್ನು ಗಮನಿಸಿದ ಸ್ವಯಂಸೇವಕರು ನೀರು ಹಾಗೂ ಸ್ವಚ್ಛತಾ ಉಪಕರಣಗಳ ಸಹಾಯದಿಂದ ಗೋಡೆಗಳನ್ನು ಸಂಪೂರ್ಣವಾಗಿ ತೊಳೆದು ಶುಚಿಗೊಳಿಸಿದರು. ಇದರಿಂದ ಸಾರ್ವಜನಿಕ ಸ್ಥಳದ ಸ್ವಚ್ಛತೆ ಮತ್ತು ಸೌಂದರ್ಯ ಹೆಚ್ಚಾಯಿತು. ಅಲ್ಲದೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯತೆಯ ಕುರಿತು ಜಾಗೃತಿ ಮೂಡಿಸಿದರು.
ಇನ್ನೊಂದೆಡೆ, ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಅಧ್ಯಾಪಕ ಡಾ. ಜಯೇಶ್ ಚಂದ್ರನ್ ಹಾಗೂ ಡಾ. ರಾಕೇಶ್ ಕೃಷ್ಣ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂಸೇವಕರು ಸರ್ವಿಸ್ ಬಸ್ ನಿಲ್ದಾಣದ ಒಳಭಾಗದಲ್ಲಿ ಸಮಗ್ರ ಸ್ವಚ್ಛತಾ ಕಾರ್ಯ ನಡೆಸಿದರು. ಬಸ್ ನಿಲ್ದಾಣದಲ್ಲಿ ಚದುರಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಆಹಾರ ಪ್ಯಾಕೆಟ್‌ಗಳು, ಕಾಗದ ಹಾಗೂ ಇತರ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು. ನಗರದ ಅತ್ಯಂತ ಜನನಿಬಿಡ ಸಾರ್ವಜನಿಕ ಸಾರಿಗೆ ಕೇಂದ್ರಗಳಲ್ಲಿ ಒಂದಾದ ಈ ಪ್ರದೇಶವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಪ್ರಯಾಣಿಕರಲ್ಲಿ ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಕ್ರಮವನ್ನು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಹಾಗೂ ಎಂ.ಆರ್.ಪಿ.ಎಲ್-ಒಎನ್‌ಜಿಸಿ ಸಂಸ್ಥೆಯ ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ನೀಡಲಾಗುತ್ತಿರುವ ಸಹಕಾರದೊಂದಿಗೆ ಆಯೋಜಿಸಲಾಯಿತು. ಸಮುದಾಯದ ಪಾಲ್ಗೊಳ್ಳುವಿಕೆ, ಪರಿಸರ ಸಂರಕ್ಷಣೆ ಮತ್ತು ನಾಗರಿಕ ಜವಾಬ್ದಾರಿಯನ್ನು ಉತ್ತೇಜಿಸುವ ಈ ಅಭಿಯಾನವು ಸ್ವಚ್ಛ, ಆರೋಗ್ಯಕರ ಹಾಗೂ ಜವಾಬ್ದಾರಿಯುತ ಮಂಗಳೂರಿನ ನಿರ್ಮಾಣಕ್ಕೆ ನಾಗರಿಕರನ್ನು ನಿರಂತರವಾಗಿ ಪ್ರೇರೇಪಿಸುತ್ತಿದೆ.
ಚರಂಡಿಯ ಸ್ವಚ್ಛತಾ ಕಾರ್ಯ:
ಹಿರಿಯ ಸ್ವಯಂಸೇವಕರಾದ ಸೌರಾಜ್ ಮಂಗಳೂರು, ಬಾಲಕೃಷ್ಣ ಭಟ್, ಉದಯ್, ಪ್ರಕಾಶ್, ಶಿವರಾಮ್ ಎ., ಮೆಹಬೂಬ್, ತಾರಾನಾಥ ಆಳ್ವ, ಸಚಿನ್ ಶೆಟ್ಟಿ, ಪ್ರಜ್ವಲ್, ಪ್ರಥಮ್ ಹಾಗೂ ನವನೀತ್ ಶೆಟ್ಟಿ ಅವರ ತಂಡವು ಸರ್ವಿಸ್ ಬಸ್ ನಿಲ್ದಾಣದ ಸುತ್ತಮುತ್ತಲಿನ ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಂಡಿತು. ಮಳೆ ನೀರಿನ ಹರಿವಿಗೆ ಅಡ್ಡಿಯಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಮಣ್ಣು, ಕಸ ಹಾಗೂ ಇತರೆ ಅಡೆತಡೆಗಳನ್ನು ತೆರವುಗೊಳಿಸಿ ಚರಂಡಿಗಳನ್ನು ಶುಚಿಗೊಳಿಸಲಾಯಿತು.
ಮುಂಗಾರು ಮಳೆಯ ಮುನ್ನ ಕೈಗೊಂಡ ಈ ಕಾರ್ಯದಿಂದ ಮಳೆ ನೀರು ಸರಾಗವಾಗಿ ಹರಿಯಲು ಸಹಕಾರಿಯಾಗಲಿದ್ದು, ನೀರು ನಿಲ್ಲುವಿಕೆ ಹಾಗೂ ಪ್ರವಾಹದಂತಹ ಸಮಸ್ಯೆಗಳನ್ನು ತಡೆಗಟ್ಟಲು ನೆರವಾಗಲಿದೆ. ನಗರ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಚರಂಡಿಗಳ ನಿಯಮಿತ ನಿರ್ವಹಣೆ ಅತ್ಯಂತ ಅಗತ್ಯವೆಂದು ಸ್ವಯಂಸೇವಕರು ಅಭಿಪ್ರಾಯಪಟ್ಟರು.









