‘ಚಿಕ್ಕ ಮೇಳ’ಗಳ ಹೆಸರಿನಲ್ಲಿ ಹಣ ಸಂಪಾದನೆಗೆ ಇಳಿದರೆ ಜೋಕೆ..

‘ಚಿಕ್ಕ ಮೇಳ’ಗಳ ಹೆಸರಿನಲ್ಲಿ ಹಣ ಸಂಪಾದನೆಗೆ ಇಳಿದರೆ ಜೋಕೆ..


ಮಂಗಳೂರು: ಶತಶತಮಾನಗಳ ಭವ್ಯ ಇತಿಹಾಸವಿರುವ ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನದ ಪವಿತ್ರತೆಯನ್ನು ಗಾಳಿಗೆ ತೂರಿ, ಮಳೆಗಾಲದ ‘ಚಿಕ್ಕ ಮೇಳ’ಗಳ ಹೆಸರಿನಲ್ಲಿ ಹಣ ಸಂಪಾದನೆಯ ದಂಧೆಗೆ ಇಳಿಯುವವರ ವಿರುದ್ಧ “ತೆಂಕುತಿಟ್ಟು ಸಣ್ಣ ಮೇಳಗಳ ಒಕ್ಕೂಟ” ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಕಲೆಯ ಘನತೆಗೆ ಕುಂದು ತರುತ್ತಿರುವ ಇಂತಹ ಅನಧಿಕೃತ ತಂಡಗಳಿಗೆ ಬ್ರೇಕ್ ಹಾಕಲು ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದ್ದು, ಒಕ್ಕೂಟದ ಪರವಾನಗಿ ಇಲ್ಲದೆ ನಿಯಮ ಮೀರಿ ಮನೆ ಮನೆಗೆ ನುಗ್ಗುವ ಅಥವಾ ಯಕ್ಷ ವೇಷಭೂಷಣ ಧರಿಸಿ ರಸ್ತೆಗಳಲ್ಲಿ ಭಿಕ್ಷಾಟನೆ ನಡೆಸುವವರನ್ನು ಸಾರ್ವಜನಿಕರೇ ತಕ್ಷಣವೇ ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದರು.

ಹಿಂದಿನ ಕಾಲದಲ್ಲಿ ಬಡ ಕಲಾವಿದರು ಗೌರವಯುತವಾಗಿ ಮನೆ ಮನೆಗೆ ತೆರಳಿ ‘ಚಿಕ್ಕಮೇಳ’ ಪ್ರದರ್ಶಿಸಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ ಇಂದು ಯಕ್ಷಗಾನದ ಕನಿಷ್ಠ ಜ್ಞಾನವೂ ಇಲ್ಲದವರು ತಂಡಗಳನ್ನು ಕಟ್ಟಿ ಹಣ ಸಂಪಾದನೆಯನ್ನೇ ಮುಖ್ಯವಾಗಿಸಿಕೊಂಡಿದ್ದಾರೆ. ಕಳೆದ ಬಾರಿ ಇಂತಹ ತಂಡಗಳಿಂದ ಹಲವು ಅಸಂಬದ್ಧ ಮತ್ತು ಅನಿಪೇಕ್ಷಿತ ಘಟನೆಗಳು ನಡೆದು ಕಲೆಯ ಹೆಸರಿಗೆ ಮಸಿ ಬಳಿಯುವ ಕೆಲಸವಾಗಿದೆ. ಇದಕ್ಕೆ ತಕ್ಷಣವೇ ಇತಿಶ್ರೀ ಹಾಡಲು ಒಕ್ಕೂಟ ಮುಂದಾಗಿದ್ದು, ಇನ್ನು ಮುಂದೆ ಒಕ್ಕೂಟದ ಅಧಿಕೃತ ಪರವಾನಗಿ ಇಲ್ಲದೆ ಯಾವುದೇ ಸಣ್ಣ ಮೇಳಗಳು ತಿರುಗಾಟ ನಡೆಸುವಂತಿಲ್ಲ. ಸಾರ್ವಜನಿಕರು ಇಂತಹ ಅನಧಿಕೃತ ತಂಡಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು ಎಂದು ತಿಳಿಸಲಾಗಿದೆ ಎಂದರು. 

ಮೇಳಗಳ ಸಂಚಾರದ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದನ್ನು ಒಕ್ಕೂಟ ಗಂಭೀರವಾಗಿ ಪರಿಗಣಿಸಿದೆ. ಮೇಳಗಳ ಪ್ರದರ್ಶನ ಸಮಯವನ್ನು ಸಂಜೆ 6 ರಿಂದ ರಾತ್ರಿ 10.30 ರವರೆಗೆ ಮಾತ್ರ ನಿಗದಿಪಡಿಸಲಾಗಿದೆ. ಈ ಕಾಲಮಿತಿಯನ್ನು ಮೀರಿ ಯಾವ ತಂಡವೂ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗುವಂತಿಲ್ಲ. ಅಷ್ಟೇ ಅಲ್ಲದೆ, ಒಂದೇ ಊರಿನಲ್ಲಿ ಒಂದಕ್ಕಿಂತ ಹೆಚ್ಚು ಮೇಳಗಳು ನುಗ್ಗಿ ಜನರನ್ನು ಪೀಡಿಸುವುದಕ್ಕೂ ನಿಯಂತ್ರಣ ಹಾಕಲಾಗಿದೆ. ನಿಯಮ ಉಲ್ಲಂಘಿಸುವ ಅಥವಾ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ತಂಡಗಳ ವಿರುದ್ಧ ಕಲಾಭಿಮಾನಿಗಳು ನೇರವಾಗಿ ಒಕ್ಕೂಟಕ್ಕೆ ದೂರು ನೀಡಬಹುದು ಎಂದು ಎಚ್ಚರಿಸಲಾಗಿದೆ. 

ಹಿಂದೂ ಹಬ್ಬಗಳಾದ ನವರಾತ್ರಿ, ದಸರಾ, ಗಣೇಶೋತ್ಸವ ಹಾಗೂ ಕೃಷ್ಣಾಷ್ಟಮಿಗಳ ಸಂದರ್ಭದಲ್ಲಿ ಯಕ್ಷಗಾನದ ಪವಿತ್ರ ವೇಷಭೂಷಣಗಳನ್ನು ಧರಿಸಿ ರಸ್ತೆ, ಅಂಗಡಿ ಮುಂಗಟ್ಟುಗಳಲ್ಲಿ ಭಿಕ್ಷಾಟನೆ ಮಾಡುವುದನ್ನು ಒಕ್ಕೂಟವು ಸಂಪೂರ್ಣವಾಗಿ ನಿಷೇಧಿಸಿದೆ. ಕಲೆಯ ಗೌರವವನ್ನು ಹರಾಜು ಹಾಕುವ ಇಂತಹ ಕೃತ್ಯಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಒಂದು ವೇಳೆ ರಸ್ತೆಗಳಲ್ಲಿ ಯಕ್ಷ ವೇಷಧಾರಿಗಳು ಭಿಕ್ಷೆ ಬೇಡುವುದು ಕಂಡುಬಂದಲ್ಲಿ, ಸಾರ್ವಜನಿಕರೇ ಅವರನ್ನು ತಡೆದು ನಿಲ್ಲಿಸಿ ತಕ್ಷಣ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂದು ಕರೆ ನೀಡಲಾಗಿದೆ. ಈಗಾಗಲೇ ಪ್ರಮುಖ ಹಿಂದೂ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ಬಣ್ಣ ಹಚ್ಚುವವರು ಹಾಗೂ ವೇಷಭೂಷಣ ಬಾಡಿಗೆ ನೀಡುವವರು ಇಂತಹ ಭಿಕ್ಷಾಟನೆಗೆ ಸಹಕರಿಸಿದರೆ ಅವರ ವಿರುದ್ಧವೂ ಕಠಿಣ ನಿಲುವು ತಳೆಯಲಾಗುವುದು ಎಂದು ತಿಳಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಉಪಾಧ್ಯಕ್ಷರಾದ ರಮೇಶ್ ಕುಲಶೇಖರ, ಮೋಹನ ಕಲಂಬಾಡಿ, ಕೋಶಾಧಿಕಾರಿ ದಿವಾಕರ ದಾಸ್ ಶೃತಿ ಆಟ್ಸ್, ಕಾರ್ಯದರ್ಶಿ ಕಡಬ ದಿನೇಶ ರೈ, ಲೆಕ್ಕಪರಿಶೋಧಕ ಜಯಂತ್ ಕೆರೆಕಾಡು ಮತ್ತು ಕಾನೂನು ಸಲಹೆಗಾರರಾದ ವಕೀಲ ಮೋಹನದಾಸ್ ರೈ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article