ಮಹಿಳೆಯರ ಆರ್ಥಿಕ ಸದೃಢತೆಗೆ ಹೈನುಗಾರಿಕೆ ಉತ್ತಮ ಅವಕಾಶ: ರವಿರಾಜ ಹೆಗ್ಡೆ

ಮಹಿಳೆಯರ ಆರ್ಥಿಕ ಸದೃಢತೆಗೆ ಹೈನುಗಾರಿಕೆ ಉತ್ತಮ ಅವಕಾಶ: ರವಿರಾಜ ಹೆಗ್ಡೆ


ಮಂಗಳೂರು: ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ, ಸ್ವಾವಲಂಬಿ ಜೀವನ ನಡೆಸಲು ಹೈನುಗಾರಿಕೆ ಉತ್ತಮ ಅವಕಾಶವಾಗಿದೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮತ್ತು ಭಾರತೀಯ ಡೇರಿ ಅಸೋಸಿಯೇಶನ್ ರಾಜ್ಯ ಶಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ವಿಶ್ವ ಹಾಲು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯಲ್ಲಿ ಹೆಚ್ಚಿನ ಜನರು ತೊಡಗಿಸಿಕೊಂಡಿರುವುದು ಇದಕ್ಕೆ ಕಾರಣ. ಹೈನುಗಾರಿಕೆ ನಂಬಿದರೆ ಜೀವನದಲ್ಲಿ ಖಂಡಿತಾ ಯಶಸ್ಸು ಸಾಧ್ಯವಿದೆ. ಶೇ.80ರಷ್ಟು ಹಾಲು ಗ್ರಾಮೀಣ ಭಾಗದಿಂದಲೇ ಬರುತ್ತಿದೆ ಎಂದರು.

ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಕಳೆದ ವರ್ಷ 3.30 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದರೆ, ಈ ವರ್ಷ ಪ್ರಗತಿ ಕಂಡಿದ್ದು 4.70 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ.  ಹೈನುಗಾರಿಕೆಗೆ ಸರ್ಕಾರ, ಸಹಕಾರಿ ಸಂಘಗಳಿಂದಲೂ ಪ್ರೋತ್ಸಾಹ ಸಿಗುತ್ತಿದ್ದು ಅದನ್ನು ಬಳಸಿಕೊಳ್ಳಬೇಕು ಎಂದರು.

ಭಾರತೀಯ ಡೇರಿ ಅಸೋಸಿಯೇಶನ್ ಅಧ್ಯಕ್ಷ ಡಾ.ಸತೀಶ್ ಕುಲಕರ್ಣಿ ಮಾತನಾಡಿ, ಸಹಕಾರಿ ಸಂಘಗಳು ಹಾಗೂ ಹೈನುಗಾರರ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ಅಸೋಸಿಯೇಶನ್ ನಿರಂತರ ಪ್ರಯತ್ನ ಮಾಡುತ್ತಿದೆ. ನವೆಂಬರ್‌ನಲ್ಲಿ ರಾಷ್ಟ್ರೀಯ ಹಾಲು ದಿನಾಚರಣೆ ನಡೆಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರಗಳು ಕೃಷಿ ಮಾದರಿಯಲ್ಲೇ ಹೈನುಗಾರರಿಗೆ ಬಡ್ಡಿ ರಹಿತ ಸಾಲ, ಸಾಲ ಮನ್ನಾ, ಕಡಿಮೆ ಬಡ್ಡಿ ಸಾಲವನ್ನು ನೀಡುವಂತಾಗಬೇಕು.  ಹೈನುಗಾರರಿಗೆ ಹೆಚ್ಚಿನ ಸಬ್ಸಿಡಿ ಒದಗಿಸಬೇಕು ಎಂದರು.

ದ.ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ಎನ್‌ಡಿಡಿಬಿ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎನ್.ಬಿ. ಬೆಳವಾಡಿ, ಐಡಿಎ ರಾಜ್ಯ ಘಟಕ ಅಧ್ಯಕ್ಷ ಎನ್.ಬಿ. ಮರಾಠೆ, ರಾಜ್ಯ ಘಟಕ ಕಾರ್ಯದರ್ಶಿ ವಿಜಯೇಂದ್ರ ದೇಶಪಾಂಡೆ, ಮೈಸೂರು ಹಾಲು ಒಕ್ಕೂಟ ಮಾಜಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಕುಮಾರ್ ಬಿ.ಎನ್., ಧಾರವಾಡ ಹಾಲು ಒಕ್ಕೂಟ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕೊಡಿಯಾಲ್‌ಮಠ್, ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನ ಪಶುವೈದ್ಯಕೀಯ ಕಾಲೇಜು ಸಹಪ್ರಾಧ್ಯಾಪಕ ಡಾ. ಶಿವಕುಮಾರ್, ಎನ್‌ಎಸ್‌ಎಸ್ ಬೆಂಗಳೂರು ಜಂಟಿ ನಿರ್ದೇಶಕ ಡಾ.ರಾಘವೇಂದ್ರ ತಂತ್ರಿ, ಬೆಂಗಳೂರು ಕಹಾಮ ಮಾಜಿ ನಿರ್ದೇಶಕ ಡಾ.ಬಿ.ಪಿ. ಸುರೇಶ್, ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸುಚರಿತ ಶೆಟ್ಟಿ, ಸುಧಾಕರ ಶೆಟ್ಟಿ, ಸವಿತಾ ಶೆಟ್ಟಿ, ನಂದಕುಮಾರ್, ಪ್ರಭಾಕರ್, ಶಿವಮೂರ್ತಿ, ಮಮತಾ ಶೆಟ್ಟಿ, ಹಾಲು ಉತ್ಪಾದಕರ ಒಕ್ಕೂಟ ಆಡಳಿತ ನಿರ್ದೇಶಕ ಜಯಕುಮಾರ್ ಉಪಸ್ಥಿತರಿದ್ದರು.


ಸಾಧಕ ಹೈನುಗಾರರಿಗೆ ಗೌರವ..

2025ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದಲ್ಲಿ ಅತೀ ಹೆಚ್ಚು ಹೈನುಗಾರಿಕೆ ಸಾಧನೆ ಮಾಡಿದ ಪಿಲಿಗೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯೆ ಜಲೀಲಾ (ದಿನಕ್ಕೆ ಸರಾಸರಿ 407 ಲೀಟರ್ ಹಾಲು), ಪಡುಮಾರ್ನಾಡು ಲಿಮಾಲ ಲಿನೆಟ್ ಗೊನ್ಸಾಲ್ವಿಸ್ (ದಿನಕ್ಕೆ ಸರಾಸರಿ 360 ಲೀ.), ಉಡುಪಿ ಹಿರಿಯಡ್ಕದ ಸುಮಾ (ದಿನಕ್ಕೆ ಸರಾಸರಿ 352 ಲೀ.) ಅವರನ್ನು ಗೌರವಿಸಲಾಯಿತು.

ಒಕ್ಕೂಟದ ಶೇಖರಣಾ ವಿಭಾಗದ ವ್ಯವಸ್ಥಾಪಕ ರವಿರಾಜ್ ಉಡುಪ ವಂದಿಸಿದರು. ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಜಾನೆಟ್ ರೊಸಾರಿಯೋ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article