ಕರ್ಣಾಟಕ ಬ್ಯಾಂಕ್-ತಂಬಾಕು ಮಂಡಳಿ ಸಹಭಾಗಿತ್ವ: ನೋಂದಾಯಿತ ತಂಬಾಕು ಬೆಳೆಗಾರರಿಗೆ ವಿಶೇಷ ಹಣಕಾಸು ಸೌಲಭ್ಯ
ಮೇ 29ರಂದು ಆರಂಭಗೊಂಡ ಈ ಯೋಜನೆಯಡಿ, ತಂಬಾಕು ಮಂಡಳಿಯಲ್ಲಿ ನೋಂದಾಯಿತ ರೈತರ ಹಣಕಾಸು ಅಗತ್ಯಗಳನ್ನು ಪೂರೈಸಲು ಕರ್ಣಾಟಕ ಬ್ಯಾಂಕ್ ವಿಶೇಷ ಬ್ಯಾಂಕಿಂಗ್ ಹಾಗೂ ಸಾಲ ಸೌಲಭ್ಯಗಳ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ದೊರೆಯಲಿದ್ದು, ಹಣಕಾಸು ಸೇರ್ಪಡೆಗೆ ಉತ್ತೇಜನ ಸಿಗುವ ಜೊತೆಗೆ ತಂಬಾಕು ಕೃಷಿ ಸಮುದಾಯದ ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದೆ.
ಈ ಸಂದರ್ಭ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಎಸ್. ಭಟ್, ತಂಬಾಕು ಮಂಡಳಿಯ ಹರಾಜು ನಿರ್ದೇಶಕ ಶ್ರೀನಿವಾಸ ಬಿ.ಸಿ. ಸೇರಿದಂತೆ ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಘವೇಂದ್ರ ಎಸ್. ಭಟ್, “ರೈತ ಸಮುದಾಯವನ್ನು ಸಬಲೀಕರಿಸುವ ನಿಟ್ಟಿನಲ್ಲಿ ಅಗತ್ಯಾಧಾರಿತ ಹಾಗೂ ನವೀನ ಹಣಕಾಸು ಪರಿಹಾರಗಳನ್ನು ಒದಗಿಸಲು ಕರ್ಣಾಟಕ ಬ್ಯಾಂಕ್ ಸದಾ ಬದ್ಧವಾಗಿದೆ. ತಂಬಾಕು ಮಂಡಳಿಯೊಂದಿಗಿನ ಈ ಸಹಭಾಗಿತ್ವದಿಂದ ನೋಂದಾಯಿತ ತಂಬಾಕು ಬೆಳೆಗಾರರಿಗೆ ಬ್ಯಾಂಕಿಂಗ್ ಸೇವೆಗಳು ಮತ್ತು ಸಾಲ ಸೌಲಭ್ಯಗಳು ಸುಲಭವಾಗಿ ಲಭ್ಯವಾಗಲಿದ್ದು, ಅವರ ಉತ್ಪಾದಕತೆ ಹಾಗೂ ಜೀವನಮಟ್ಟ ಸುಧಾರಣೆಗೆ ನೆರವಾಗಲಿದೆ” ಎಂದು ಹೇಳಿದರು.
ತಂಬಾಕು ಮಂಡಳಿಯ ಹರಾಜು ನಿರ್ದೇಶಕ ಶ್ರೀನಿವಾಸ ಬಿ.ಸಿ. ಮಾತನಾಡಿ, “ನೋಂದಾಯಿತ ತಂಬಾಕು ಬೆಳೆಗಾರರಿಗೆ ಹಣಕಾಸು ಸೇವೆಗಳ ಪ್ರವೇಶವನ್ನು ವಿಸ್ತರಿಸುವಲ್ಲಿ ಈ ಸಹಯೋಗ ಮಹತ್ವದ ಹೆಜ್ಜೆಯಾಗಿದೆ. ಸಂಸ್ಥೆಗಳ ಬೆಂಬಲ ಹಾಗೂ ವಿಶೇಷ ಬ್ಯಾಂಕಿಂಗ್ ಪರಿಹಾರಗಳ ಸಂಯೋಜನೆಯಿಂದ ರೈತರು ತಮ್ಮ ಹಣಕಾಸಿನ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ತಂಬಾಕು ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಸಹಕಾರಿಯಾಗಲಿದೆ” ಎಂದು ತಿಳಿಸಿದರು.