ಮಾದಕ ವಸ್ತು ವಿರೋಧಿ ಜಾಗೃತಿ ರ‍್ಯಾಲಿ
ಮಂಗಳೂರು: ಮಾದಕವಸ್ತು ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು (ಎಫ್‌ಎಂಸಿಐ) ಕಂಕನಾಡಿ ವತಿಯಿಂದ ಜೂ.3ರಂದು ಬೆಳಗ್ಗೆ 7 ಗಂಟೆಗೆ ಫಾದರ್ ಮುಲ್ಲರ್ ಆವರಣದಿಂದ ಮಾದಕ ವಸ್ತು ವಿರೋಧಿ ಜಾಗೃತಿ ರ‍್ಯಾಲಿ ನಡೆಯಲಿದೆ.
ಮಾದಕವಸ್ತು ಸೇವನೆಯ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಮಾದಕವಸ್ತು ಸಾಗಣೆ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಯಲು ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದ್ದರೂ, ಯುವಜನರನ್ನು ಮಾದಕವಸ್ತುಗಳಿಂದ ದೂರವಿಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲೂ ಇದೆ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಮೈಕಲ್ ಸಾಂತುಮಯರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ರ್ಯಾಲಿಗೆ ಚಾಲನೆ ನೀಡಲಿದ್ದು, ಉದ್ಯಮಿ ಹಾಗೂ ಸಮಾಜ ಸೇವಕ ಮೈಕೆಲ್ ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ನಿರ್ದೇಶಕ ಫಾ. ಫೌಸ್ಟಿನ್ ಲೂಕಾಸ್ ಲೋಬೊ ಭಾಗವಹಿಸುವರು. 3,000ಕ್ಕೂ ಅಧಿಕ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಈ ರ್ಯಾಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ರ್ಯಾಲಿಯು ಫಾದರ್ ಮುಲ್ಲರ್ ಚಾಪೆಲ್ನಿಂದ ಆರಂಭವಾಗಿ ಫಾದರ್ ಮುಲ್ಲರ್ ವೃತ್ತ, ಕರಾವಳಿ ವೃತ್ತ ಹಾಗೂ ಪಂಪ್ವೆಲ್ ವೃತ್ತದ ಪಶ್ಚಿಮ ಭಾಗದ ಮೂಲಕ ಸಾಗಲಿದ್ದು, ಬಳಿಕ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ಪ್ರವೇಶಿಸಿ ಫಾದರ್ ಮುಲ್ಲರ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಸಮಾರೋಪ ಸಮಾರಂಭಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಮಿಥುನ್ ಎಚ್.ಎನ್., ಎಸಿಪಿ ಗೀತಾ ಕುಲಕರ್ಣಿ ಹಾಗೂ ಎಸಿಪಿ ರವೀಶ್ ನಾಯಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.