ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಮುಂಗಾರು
ಮಂಗಳೂರು: ಹಲವು ದಿನಗಳಿಂದ ಸುಸ್ತಾಗಿ, ದುರ್ಬಲಗೊಂಡಿದ್ದ ಮುಂಗಾರು ಮಾರುತಗಳು ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಸಕ್ರಿಯಗೊಂಡಿವೆ. ಕರಾವಳಿಯ ಬಹುತೇಕ ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ವರುಣದೇವ ಅಬ್ಬರದ ಎಂಟ್ರಿ ಕೊಟ್ಟಿದ್ದು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಯುದ್ದಕ್ಕೂ ಉತ್ತಮ ಮಳೆಯಾಗಿದೆ.
ಮಂಗಳವಾರ ಬೆಳಗ್ಗೆ ಎಂದಿನಂತೆ ಬಿಸಿಲಿನ ವಾತಾವರಣ ಕಂಡುಬಂದಿತ್ತಾದರೂ, ಮಧ್ಯಾಹ್ನವಾಗುತ್ತಿದ್ದಂತೆ ಕಾರ್ಮೋಡಗಳು ಕವಿದು ಪೂರ್ಣ ಪ್ರಮಾಣದ ಮುಂಗಾರಿನ ಆರ್ಭಟ ಶುರುವಾಗಿದೆ. ಮಧ್ಯಾಹ್ನದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಮಳೆಯ ಆರ್ಭಟಕ್ಕೆ ಕರಾವಳಿ ಜನತೆಗೆ ಪೂರ್ಣ ಪ್ರಮಾಣದ ಮುಂಗಾರು ಮಳೆಯ ನೈಜ ಅನುಭವವಾಗುತ್ತಿದೆ. ಹವಾಮಾನ ಇಲಾಖೆಯ ಮಂಗಳವಾರ ಬೆಳಗಿನ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 44 ಮಿ.ಮೀ ಮಳೆ ದಾಖಲಾಗಿದೆ. ಇವುಗಳ ಪೈಕಿ ಉಳ್ಳಾಲ ಹಾಗೂ ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ವರದಿಯಾಗಿದೆ.
ಬಿಟ್ಟು ಬಿಟ್ಟು ಸಾಮಾನ್ಯ ಮಳೆ ತೀರ ಪ್ರದೇಶದಲ್ಲಿ ಎಚ್ಚರಿಕೆ:
ಬುಧವಾರ ನೆರೆಯ ಕಾಸರಗೋಡು ಸೇರಿದಂತೆ ಇಡೀ ಕರಾವಳಿ ಭಾಗದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಆದರೆ ಸಮುದ್ರ ತೀರದ ಭಾಗಗಳಲ್ಲಿ ಮಳೆಯ ತೀವ್ರತೆ ಸ್ವಲ್ಪ ಹೆಚ್ಚಿರಲಿದ್ದು, ಕರಾವಳಿ ನಿವಾಸಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ.
ಮುಂದಿನ 10 ದಿನ ಕರಾವಳಿಗೆ ಮಳೆ:
ಸದ್ಯದ ಹವಾಮಾನದ ಮುನ್ಸೂಚನೆಯ ಪ್ರಕಾರ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳ ಕಾಲವೂ ಇದೇ ರೀತಿ ಉತ್ತಮ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ಅವಧಿಯಲ್ಲಿ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ವಾತಾವರಣ ತಲ್ಲಣಗೊಂಡಿದ್ದು, ಗಂಟೆಗೆ 50 ರಿಂದ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಪರಿಣಾಮವಾಗಿ ಪಶ್ಚಿಮಘಟ್ಟದ ತಳಭಾಗದ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ತುಸು ಹೆಚ್ಚಾಗಲಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ.