ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆ: ಬುಧವಾರ ದಕ್ಷಿಣ ಕನ್ನಡ, ಉಡುಪಿಗೆ ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು: ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಮಾನ್ಯ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರಾವಳಿ ತೀರ ಪ್ರದೇಶಗಳಲ್ಲಿ ಬಿಟ್ಟು ಬಿಟ್ಟು ಮಳೆಯಾಗಲಿದ್ದು, ಒಳನಾಡಿನ ಉಳಿದ ಭಾಗಗಳಲ್ಲಿ ದಿನದಲ್ಲಿ ಕನಿಷ್ಠ ಎರಡರಿಂದ ಮೂರು ಬಾರಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬುಧವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.
ಮಂಗಳವಾರ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕೇವಲ ಮೋಡ ಹಾಗೂ ಅಲ್ಪ ಬಿಸಿಲಿನ ಮಿಶ್ರಿತ ವಾತಾವರಣವಿತ್ತು. ಆದರೆ ಮಧ್ಯಾಹ್ನದ ನಂತರ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಹಲವೆಡೆ ಉತ್ತಮ ಮಳೆಯಾಗಿದೆ. ಸಂಜೆ ವೇಳೆಗೆ ಮಂಗಳೂರು ನಗರ, ಕೋಣಾಜೆ, ಸುಳ್ಯ, ಬೆಳ್ತಂಗಡಿ ಮತ್ತು ಮೂಲ್ಕಿ ಸೇರಿದಂತೆ ಕರಾವಳಿಯ ವಿವಿಧ ಭಾಗಗಳಲ್ಲಿ ಭಾರಿ ಮಳೆ ಸುರಿದಿದೆ. ಪ್ರಸ್ತುತ ಮುನ್ಸೂಚನೆಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಅಬ್ಬರ ಹೀಗೆಯೇ ಮುಂದುವರಿಯಲಿದ್ದು, ಜೂನ್ 15ರ ನಂತರ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗುವ ಲಕ್ಷಣಗಳಿವೆ. ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 17.9 ಮಿಮೀ ಮಳೆ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 9.7 ಮಿಮೀ, ಬಂಟ್ವಾಳದಲ್ಲಿ 8.1 ಮಿಮೀ, ಮಂಗಳೂರು 4.1 ಮಿಮೀ, ಪುತ್ತೂರು 10.3 ಮಿಮೀ, ಸುಳ್ಯ 5.3 ಮಿಮೀ, ಮೂಡುಬಿದಿರೆ 5.3 ಮಿಮೀ, ಕಡಬ 20.1ಮಿಮಿ, ಮೂಲ್ಕಿ 7.1ಮಿಮಿ, ಉಳ್ಳಾಲದಲ್ಲಿ 15.4 ಮಿಮೀ ಮಳೆಯಾಗಿದೆ.
ಮುಂಗಾರು ದುರ್ಬಲಕ್ಕೆ ಹವಾಮಾನ ವೈಪರೀತ್ಯ ಕಾರಣ:
ಅರಬ್ಬಿ ಸಮುದ್ರದ ಮಧ್ಯಮ ಸ್ತರದಲ್ಲಿ ಗಾಳಿಯ ತಿರುಗುವಿಕೆ ನಿರಂತರವಾಗಿ ಮುಂದುವರಿದಿರುವುದರಿಂದ ಸದ್ಯಕ್ಕೆ ಮುಂಗಾರು ಮಾರುತಗಳು ತಣ್ಣಗಾಗಿವೆ. ವಾತಾವರಣದ ಮೇಲ್ಸ್ತರದಲ್ಲಿ ಆಸ್ಟ್ರೇಲಿಯಾ ಕಡೆಯಿಂದ ಬೀಸುವ ಮಾರುತಗಳು ದುರ್ಬಲಗೊಂಡಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಇದೇ ಅವಧಿಯಲ್ಲಿ ಸೋಮಾಲಿಯಾ ಜೆಟ್ ಸ್ಟ್ರೀಮ್ ತೀವ್ರವಾಗಿ ಪ್ರಬಲಗೊಂಡಿದೆ.
ಕರಾವಳಿ ನಿವಾಸಿಗಳಿಗೆ ಎನ್‌ಡಿಆರ್‌ಎಫ್ ಎಚ್ಚರಿಕೆ:
ಅರಬ್ಬಿ ಸಮುದ್ರದ ವ್ಯಾಪ್ತಿಯಲ್ಲಿ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮುಂದಿನ ಕೆಲವು ದಿನಗಳವರೆಗೆ ಗಂಟೆಗೆ ಗರಿಷ್ಠ 55 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ತೀರ ಪ್ರದೇಶದ ನಿವಾಸಿಗಳು ಮತ್ತು ಮೀನುಗಾರರು ಕಡ್ಡಾಯವಾಗಿ ಜಾಗರೂಕರಾಗಿರಬೇಕು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.