‘ಬರವಣಿಗೆಗೆ ಭಾಷೆಗಿಂತ ಭಾಷಾ ಸಾಮರ್ಥ್ಯವನ್ನು ಬಳಸುವುದು ಮುಖ್ಯ’: ದೀಪಾ ಭಾಸ್ತಿ
ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಪಿ.ಪಿ ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಮಂಗಳೂರು ವಿವಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಆಯೋಜಿಸಲಾದ ಪಿಪಿ ಗೋಮತಿ ಸ್ಮಾರಕ ವಾರ್ಷಿಕ ಉಪನ್ಯಾಸದ ಸಂದರ್ಭ ಸಭಿಕರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಅವರನ್ನು ಫೋನ್ ಬದಿಗೊತ್ತಿ ಪುಸ್ತಕಗಳ ಹವ್ಯಾಸವನ್ನು ಹಚ್ಚಿಸಿಕೊಳ್ಳಬೇಕೆಂದೇನಿಲ್ಲ. ಫೋನ್ಗಳಲ್ಲಿ ಕೇಳು ಪುಸ್ತಕ ಸೇರಿದಂತೆ ಹಲವು ರೀತಿಯ ಆಯ್ಕೆಗಳಿವೆ. ಆ ಬಗ್ಗೆಯೂ ಪುಸ್ತಕ ಓದಲು ಯುವ ಪೀಳಿಗೆಯನ್ನು ಪ್ರೇರೇಪಿಸಬಹುದು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಯುವ ಲೇಖಕರಿಗೆ ಬರೆಯುವ ಆಸಕ್ತಿ ಇದೆ. ಆದರೆ ಓದದೆ ಬರೆಯಲು ಸಾಧ್ಯ ಇಲ್ಲ. ಹೆಚ್ಚು ಹೆಚ್ಚು ಓದಿದಾಗ ಆಲೋಚನೆಗಳು, ಹೊಸ ಐಡಿಯಾಗಳು ಬರುತ್ತವೆ. ಓದುವುದಕ್ಕಾಗಿ ಪುಸ್ತಕಗಳನ್ನೇ ನೆಚ್ಚಿಕೊಳ್ಳಬೇಕೆಂದೇನಿಲ್ಲ. ಆಡಿಯೋಗಳ ಮೂಲಕವೂ ಓದಿನ ಗೀಳು ಹಚ್ಚಿಸಿಕೊಳ್ಳಬಹುದು. ಭಾಷೆಯನ್ನು ಭಾಷಣಕ್ಕೆ ಮಾತ್ರ ಸೀಮಿತಗೊಳಿಸದೆ ದಿನನಿತ್ಯದ ಜೀವನದಲ್ಲಿ ಅದನ್ನು ಉಪಯೋಗಿಸಿಕೊಂಡಾಗ ಭಾಷೆ ಉಳಿಯುತ್ತದೆ. ಯಾವುದೂ ಪರಿಪೂರ್ಣ ಎಂದು ಹೇಳಲಾಗದು. ನನ್ನ ಅನುವಾದವೂ ಅಷ್ಟೇ. ಭಾನು ಮುಸ್ತಾಕ್ ಅವರ ಪುಸ್ತಕವನ್ನು ಅನುವಾದ ಮಾಡುವ ಮೊದಲು ನಾನು ತಿಂಗಳುಗಟ್ಟಲೆ ಸಂಶೋಧನೆ ಮಾಡಿದ್ದೆ. ಸಮುದಾಯದ ಬಗೆಗಿನ ಸಿನೆಮಾ, ಸೀರಿಯಲ್, ಸಂಗೀತವನ್ನು ಕೇಳಿ ಅರ್ಥ ಮಾಡಿಕೊಂಡಿದ್ದೇನೆ. ಭಾನು ಮುಸ್ತಾಕ್ ಅವರ ಕೃತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯಗಳಲ್ಲೂ ಅಂತಹ ದೌರ್ಜನ್ಯವಿದೆ. ಎಲ್ಲಾ ಹೆಣ್ಣು ಮಕ್ಕಳು ಅಂತಹ ಮಾನಸಿಕತೆಯಿಂದ ತೊಳಲುತ್ತಾರೆ. ಸಾಂಸ್ಕೃತಿಕವಾಗಿ ಭಿನ್ನತೆ ಇದ್ದರೂ ಸಮಸ್ಯೆಗಳು ಬಹುತೇಕ ಸಾಮಾನ್ಯವಾಗಿರುತ್ತದೆ. ಹಾಗಾಗಿ ಆ ಕಥೆಗಳು ಸಾರ್ವತ್ರಿಕ ಎಂದು ಪ್ರಶ್ನೆಯೊಂದಕ್ಕೆ ದೀಪಾ ಭಾಸ್ತಿ ಪ್ರತಿಕ್ರಿಯಿಸಿದರು.
ವೇದಿಕೆಯಲ್ಲಿ ಪಿಪಿ ಗೋಮತಿ ಮೆಮೋರಿಯಲ್ ಟ್ರಸ್ಟ್‌ನ ಬಂಬಿನ ಚಿನ್ನಮ್ಮ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಹಾಗೂ ಹಿರಿಯ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯ ಸ್ವಾಗತಿಸಿದರು. ಪುಷ್ಪಾ ಎಸ್. ಕಾರಂತ್ ನಾಡಗೀತೆ ಹಾಡಿದರು. ಪಿಪಿ. ಗೋಮತಿ ಬಗ್ಗೆ ಮೀರಾ ಅರಾನ್ಹ ಪರಿಚಯ ನೀಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ. ವಂದಿಸಿದರು.