ಧರ್ಮದಿಂದ ಜನರ ವಿಭಜನೆಗೆ ನನ್ನ ವಿರೋಧ: ಬೂಕರ್ ದೀಪಾ ಭಾಸ್ತಿ

ಧರ್ಮದಿಂದ ಜನರ ವಿಭಜನೆಗೆ ನನ್ನ ವಿರೋಧ: ಬೂಕರ್ ದೀಪಾ ಭಾಸ್ತಿ


ಮಂಗಳೂರು: ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮಗಳು ಸಮಸ್ಯೆ ಅಲ್ಲ. ಆದರೆ ಕೆಲ ಜನರು ಧರ್ಮವನ್ನು ಅಸ್ತ್ರವನ್ನಾಗಿಸಿಕೊಂಡು ಜನರನ್ನು ವಿಭಜಿಸುತ್ತಿರುವುದರ ಬಗ್ಗೆ ನನ್ನ ವಿರೋಧವಿರುವುದು. ಯಾವುದೇ ಧರ್ಮಗಳ ಬಗ್ಗೆ ನನ್ನ ಆಕ್ಷೇಪವಿಲ್ಲ. ಹಿಂದೂ ಧರ್ಮದಲ್ಲಿ ವೇದಗಳಿಂದ ಹಿಡಿದು ಸಂಸ್ಕೃತ ಎಲ್ಲವೂ ಒಳ್ಳೆಯದೇ. ಅದನ್ನು ಯಾವತ್ತೂ ತಪ್ಪು ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ ಎಂದು ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ, ಬರಹಗಾರ್ತಿ ದೀಪಾ ಭಾಸ್ತಿ ಹೇಳಿದ್ದಾರೆ.

ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಪಿ.ಪಿ ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಮಂಗಳೂರು ವಿವಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಆಯೋಜಿಸಲಾದ ಪಿಪಿ ಗೋಮತಿ ಸ್ಮಾರಕ ವಾರ್ಷಿಕ ಉಪನ್ಯಾಸದ ಸಂದರ್ಭ ಸಭಿಕರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು. 

ನಮ್ಮ ಯಾವುದೇ ಧರ್ಮಗಳಲ್ಲಿ ತಪ್ಪು ಇಲ್ಲ. ಆದರೆ ನಮ್ಮ ಧರ್ಮ ಹೀಗೆ ಎಂದು ಹೇಳಿಕೊಂಡು ದುರುಪಯೋಗ ಮಾಡಿಕೊಳ್ಳುವವರ ಬಗ್ಗೆ ನನಗೆ ವಿವಾದ ಇರುವುದು. ಇದು ಎಲ್ಲಾ ಧರ್ಮ, ಭಾಷೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯವಸ್ಥೆಗಳಿಗೂ ಅನ್ವಯ. ಆ ವ್ಯತ್ಯಾಸವನ್ನು ಗಮನದಲ್ಲಿ ಇರಿಸಬೇಕೆಂಬುದು ನನ್ನ ಅಭಿಪ್ರಾಯ ಎಂದರು. 

ಭಿನ್ನಾಭಿಪ್ರಾಯ, ಸುಧಾರಣೆ, ಸ್ವತಂತ್ರ ಅಭಿಪ್ರಾಯಗಳು ಐದು ಸಾವಿರ ವರ್ಷಗಳಿಂದ ವೇದದಿಂದ ಹಿಡಿದು ಇಂದಿನವರೆಗೂ ಇದೆ. ಅದನ್ನು ಹೇಳುವಾಗ ಎಲ್ಲರೂ ಹಿಂದೂ ಧರ್ಮವನ್ನು ಉಲ್ಲೇಖಿಸುತ್ತಾರೆ. ನಮ್ಮ ದೇಶವನ್ನು ಪ್ರತಿನಿಧಿಸುವ ಬಹುತ್ವವನ್ನು ಹೊಗಳುವವರು ಹಿಂದೂ ಧರ್ಮವನ್ನು ವಿರೋಧಿಸುತ್ತಾರೆ. ನಮ್ಮ ಜಿಲ್ಲೆಯಲ್ಲಿ ನಾವು ಬಹು ಭಾಷಿಗರು ಎಂದು ಹೊಗಳಿಕೊಳ್ಳುತ್ತೇವೆ. ಭಾಷಾ ಸೂತ್ರ ಬರುವಾಗ ಸಂಸ್ಕೃತ, ಹಿಂದಿಗೆ ವಿರೋಧವಾಗುತ್ತದೆ. ಅಲ್ಲಿ ಬಹುತ್ವಕ್ಕೆ ಬೆಲೆ ಇಲ್ಲವಾಗುತ್ತದೆ ಎಂಬ ಡಾ. ಪ್ರಭಾಕರ ಜೋಶಿಯವರ ಪ್ರಶ್ನೆಗೆ ಅವರು ಉತ್ತರಿಸಿದರು. 

ಹಿಂದಿಯ ಬಗ್ಗೆಯೂ ಯಾರದ್ದೂ ವಿರೋಧ ಇಲ್ಲ. ಅದು ಸುಂದರ ಭಾಷೆ. ನಾವು ಹೇಗೆ ಭಾಷೆಯನ್ನು ಉಪಯೋಗಿಸುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ಹಾಗೆಯೇ, ಹಿಂದೂ ಧರ್ಮ ಒಳ್ಳೆಯ ಧರ್ಮ ಆದರೆ ಅದನ್ನು ಹೇಗೆ ಬಳಸಲಾಗುತ್ತದೆ ಮತ್ತು ಅದು ಏನು ಎಂಬುದರ ವ್ಯತ್ಯಾಸ ಮುಖ್ಯವಾಗುತ್ತದೆ ಎಂದು ಹೇಳಿದರು. 

ಧರ್ಮ ಗ್ರಂಥಗಳನ್ನೂ ಅನುವಾದಿಸುವೆ ..

ಆಂಗ್ಲಭಾಷೆಯಲ್ಲಿ ಬರೆಯುವಷ್ಟು ಸಾಮರ್ಥ್ಯ ಕನ್ನಡದಲ್ಲಿ ನನಗಿಲ್ಲ. ಸ್ವಲ್ಪ ಸ್ವಲ್ಪ ಬರೆಯುತ್ತೇನೆ. ಬರೆಯುವ ಆಸೆಯೂ ಇದೆ. ಕನ್ನಡಕ್ಕೆ ಹತ್ತಿರ ಆಗಬೇಕೆಂಬ ಉದ್ದೇಶದಿಂದಲೇ ಅನುವಾದಕ್ಕೆ ಮುಂದಾಗಿದ್ದು. ಅನುವಾದದ ಮೂಲಕ ಬಹಳಷ್ಟು ಕನ್ನಡ ಪದಗಳನ್ನು ಉಪಯೋಗಿಸುವ, ನೆನಪಿಸುವ ಅವಕಾಶ ದೊರೆಯಿತು. ಧಾರ್ಮಿಕ ಗ್ರಂಥವಾಗಲಿ, ಇತ್ತೀಚಿನ ಸಾಹಿತ್ಯವಾಗಲಿ, 20ನೇ ಶತಮಾನದ ಲೇಖಕರ ಸಾವಿರಾರು ಗ್ರಂಥಗಳಿವೆ. ಅದನ್ನೆಲ್ಲಾ ನನ್ನ ಒಬ್ಬಳಿಂದ ಮಾಡಲು ಸಾಧ್ಯವಿಲ್ಲ. ಭಾನು ಮುಸ್ತಾಕ್ ಮಾಡಿದ್ದೀರಾ? ಬೇರೆ ಯಾಕಿಲ್ಲ ಎಂದು ಕೇಳುತ್ತಾರೆ. ಹಾಗೆ ಮಾಡಲು ಹೋದರೆ ಕೊನೆಯೇ ಇರದು. ನಾನು ಪೂರ್ಣಕಾಲಿಕ ಅನುವಾದಕಿ ಅಲ್ಲ. ಏನೋ ಮಾಡಬೇಕು ಅನ್ನಿಸಿದಾಗ ಅನುವಾದ ಮಾಡುತ್ತೇನೆ. ಹಾಗೆಯೇ ಧಾರ್ಮಿಕ ಗ್ರಂಥಗಳು ಮಾಡುವುದೇ ಇಲ್ಲ ಎಂಬ ನಿಯಮ ಇಟ್ಟುಕೊಂಡಿಲ್ಲ. ಸಂದರ್ಭ, ಅವಕಾಶ, ಆಸಕ್ತಿ ಬಂದರೆ ಯಾಕೆ ಬರೆಯಬಾರದು. ಸದ್ಯ ಅಂತಹ ಯಾವುದೇ ಆಲೋಚನೆ ಇಲ್ಲ ಎಂದು ಕಸಪಾ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article