ಪೊಲೀಸರ ಕೈಯಿಂದ ಆರೋಪಿ ಪರಾರಿ
Saturday, June 27, 2026
ಮಂಗಳೂರು: ನಗರದ ಸೂಟರ್‌ಪೇಟೆಯ ಗ್ರಾಮಲೆಕ್ಕಾಧಿಕಾರಿ ಕಚೇರಿ ಬಳಿ ಜೂ.14ರಂದು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆಗೈದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಓರ್ವ ಪೊಲೀಸರ ಕೈಯಿಂದ ತಪ್ಪಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಗೋರಖ್‌ಪುರ್ ನಿವಾಸಿಗಳಾದ ರವಿ ಬರ್ವ, ಸಾಹಿಲ್, ಬಾಗಲಕೋಟೆಯ ಅಲ್ತಾಫ್ ಹುಸೇನ್ ಎಂಬವರನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆ ಪೈಕಿ ಅಲ್ತಾಫ್ ಹುಸೇನ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.
ಈ ಆರೋಪಿಗಳು ನಗರದ ಬಸ್ ನಿಲ್ದಾಣದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದರು. ಹಾಗೇ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರು ಠಾಣೆಗೆ ಕರೆ ತರುವ ವೇಳೆ ಅಲ್ತಾಫ್ ಹುಸೇನ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ತಕ್ಷಣ ಪೊಲೀಸರು ಹುಡುಕಾಡ ನಡೆಸಿದರೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.