ದ.ಕ. ಜಿಲ್ಲೆಯಲ್ಲಿ ಎಸ್.ಐ.ಆರ್ ಪ್ರಕ್ರಿಯೆಗೆ ಚಾಲನೆ: ಮತಗಟ್ಟೆಗಳಿಗೆ ಡಿ.ಸಿ. ಭೇಟಿ
ಇದರ ಮೊದಲ ಹಂತವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲು ಚಾಲನೆ ನೀಡಿದರು. ಜಿಲ್ಲೆಯ 1876 ಮತಗಟ್ಟೆಗಳಲ್ಲಿ ಬಿ.ಎಲ್.ಒ.ಗಳು ಮತದಾರರ ಮನೆ ಬಾಗಿಲಿಗೆ ತೆರಳಿ ಗಣತಿ ನಮೂನೆ (Enumeration Form)ಗಳನ್ನು ಮತದಾರರಿಗೆ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದರು.
ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರು ಮಂಗಳವಾರ ಮಂಗಳೂರು ನಗರದ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆಯನ್ನು ವಿತರಿಸಿದರು. ಅಲ್ಲದೆ ವಿವಿಧ ಮತಗಟ್ಟೆಗಳಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಉಪಸ್ಥಿತರಿದ್ದರು.
ಜಿಲ್ಲೆಯ ವಿವಿದೆಡೆ ಹಿರಿಯ ಅಧಿಕಾರಿಗಳು ಮತದಾರರ ಮನೆಗೆ ತೆರಳಿ ಎಸ್.ಐ.ಆರ್ ಪ್ರಕ್ರಿಯೆ ಪರಿಶೀಲಿಸಿದರು. ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗಡೆ, ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರ ಮನೆಗೂ ಅಧಿಕಾರಿಗಳು ಭೇಟಿ ನೀಡಿ ಗಣತಿ ನಮೂನೆಯನ್ನು ನೀಡಿದರು. ಹಿರಿಯ ನಾಗರಿಕರಿಗೆ ಖುದ್ದು ಭೇಟಿ ನೀಡಿ ನಮೂನೆ ನೀಡಲಾಯಿತು.
ಮತದಾರರ ಸೌಲಭ್ಯ ಕೇಂದ್ರ..
ಮತದಾರರಿಗೆ ದ್ವಿಪ್ರತಿಯಲ್ಲಿ ಎನ್ಯುಮರೇಷನ್ ಫಾರ್ಮ್ ನೀಡಲಾಗಿದ್ದು, ಅಗತ್ಯ ಮಾಹಿತಿಯನ್ನು ಈ ನಮೂನೆಯಲ್ಲಿ ಭರ್ತಿ ಮಾಡಿ, 1 ಪ್ರತಿಯನ್ನು ಮತದಾರರು ತಮ್ಮ ಬಳಿ ಇಟ್ಟುಕೊಂಡು ಮತ್ತೊಂದು ಪ್ರತಿಯನ್ನು ಬಿ.ಎಲ್.ಒ.ಗಳಿಗೆ ಹಸ್ತಾಂತರಿಸಬೇಕು. ಅರ್ಜಿ ನಮೂನೆ ಭರ್ತಿ ಮಾಡಲು ಹಾಗೂ 2002 ರ ಮತದಾರರ ಪಟ್ಟಿಯ ವಿವರ ಭರ್ತಿ ಮಾಡಲು ಮತದಾರರಿಗೆ ಸಹಕರಿಸಲು ಪ್ರತಿ ಮತಗಟ್ಟೆಯಲ್ಲಿ ಮತದಾರರ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 18,05,189 ಮತದಾರರು ಇದ್ದಾರೆ.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾರದರ್ಶಕತೆ ಖಚಿತಪಡಿಸಲು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿಯೊಂದು ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟ್ರನ್ನು ನೇಮಕ ಮಾಡಲು ಜಿಲ್ಲಾಡಳಿತ ಸೂಚಿಸಿದೆ. ಯಾವುದೇ ಒಬ್ಬ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು, ಅದೇ ರೀತಿ ಯಾವುದೇ ಒಬ್ಬ ಅನರ್ಹ ಮತದಾರ ಮತದಾರರ ಪಟ್ಟಿಗೆ ಸೇರಬಾರದು ಎಂಬುದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮುಖ್ಯ ಉದ್ದೇಶ.
ಮತಗಟ್ಟೆ ಮಟ್ಟದ ಅಧಿಕಾರಿಗಳು ಗಣತಿ ನಮೂನೆಗಳನ್ನು ವಿತರಿಸಿ ಮತ್ತು ಸಂಗ್ರಹಿಸಲು ಮನೆ ಮನೆ ಭೇಟಿ ನೀಡುವ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಮತದಾರರು ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಈಗಿನ ಮತದಾರರ ಪಟ್ಟಿಯಲ್ಲಿರುವಂತೆ ಹೆಸರು, ಮತಗಟ್ಟೆ ಸಂಖ್ಯೆ, ವಿಧಾನಸಭಾ ಕ್ಷೇತ್ರದ ಹೆಸರು ಗಣತಿ ನಮೂನೆಯಲ್ಲಿ ಅರ್ಜಿಯಲ್ಲಿ ಮುದ್ರಣವಾಗಿದೆ. ಮತದಾರರ ಫೋಟೋ ಹಳೆಯದಾಗಿದ್ದರೆ ಅರ್ಜಿಯೊಂದಿಗೆ ಹೊಸ ಫೋಟೋ ನೀಡಬಹುದು.
ಮನೆ ಮನೆ ಭೇಟಿ..
ಇಂದಿನಿಂದ ಮನೆ ಮನೆ ಭೇಟಿ ಪ್ರಾರಂಭವಾಗಿದ್ದು, ಜುಲೈ 29 ರವರೆಗೆ ನಡೆಯಲಿದೆ. ಆಗಸ್ಟ್ 5 ರಂದು ಮತದಾರರ ಕರಡು ಪಟ್ಟಿ ಪ್ರಕಟವಾಗಲಿದೆ. ಮತದಾರರ ಕ್ಲೈಮ್ ಮತ ಆಕ್ಷೇಪಣೆಗಳಿದ್ದರೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ನೀಡಬಹುದು. ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಗಣತಿ ನಮೂನೆ ಸ್ವೀಕರಿಸಿದ ಮನೆಗಳಿಗೆ ನೇರಳೆ ಬಣ್ಣದ ಸ್ಟಿಕ್ಕರ್ ಹಾಗೂ ಮನೆಗೆ ಬೀಗ ಹಾಕಿದ್ದರೆ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಲಾಗುತ್ತಿದೆ.