ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು' ಕವನ ಸಂಕಲನ ಲೋಕಾಪ೯ಣೆ

ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು' ಕವನ ಸಂಕಲನ ಲೋಕಾಪ೯ಣೆ

ಸ್ತ್ರೀ ಸೃಜನಶೀಲತೆ ಸಮಾಜದ ಅಂತರಂಗವನ್ನು ಬೆಳಗಿಸುವ ಶಕ್ತಿ: ಡಾ. ಎಂ. ಮೋಹನ್ ಆಳ್ವ


ಮೂಡುಬಿದಿರೆ: ಸೌಮ್ಯ ತಿಲಕ್ ಶೆಟ್ಟಿಯವರ ‘ಮಸಿಯ ಮಾತು' ಕವನ ಸಂಕಲನವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಲೋಕಾರ್ಪಣೆಗೈದರು. 


ನಂತರ ಮಾತನಾಡಿದ ಆಳ್ವರು ಸ್ತ್ರೀ ಎಂಬುದು ಪರಿಪೂರ್ಣತೆಯ ಸಂಕೇತ. ಆಕೆಯ ಅಂತರಂಗದ ಶಕ್ತಿ, ಸಂವೇದನೆ ಮತ್ತು ಚಿಂತನೆ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಯಾದಾಗ ಅದು ಸಮಾಜದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದರು.

ಈ ಸಂಕಲನದಲ್ಲಿರುವ ಎಲ್ಲಾ ಕವನಗಳೂ ಕವಯಿತ್ರಿ ಸೌಮ್ಯರವರ ಹೆಸರಿನಂತೆಯೇ ಮೃದುತ್ವ, ಸಂಯಮ ಮತ್ತು ಸಂವೇದನಾಶೀಲತೆಯಿಂದ ಕೂಡಿವೆ. ಕ್ಷಮತೆ, ಮಾನವೀಯತೆ ಮತ್ತು ಸಹಬಾಳ್ವೆಯ ತತ್ವವೇ ಈ ಕವನಗಳ ಜೀವಾಳವಾಗಿದೆ. ಆದ್ದರಿಂದ ಇಲ್ಲಿ ರೋಷ, ಆವೇಶ, ಸೇಡು ಅಥವಾ ದ್ವೇಷದ ಅಭಿವ್ಯಕ್ತಿಗಳಿಗೆ ಅವಕಾಶವಿಲ್ಲ, ಬದಲಾಗಿ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಜೀವನದ ಸಕಾರಾತ್ಮಕ ದೃಷ್ಟಿಕೋನವೇ ಪ್ರಧಾನವಾಗಿ ಹರಿದುಬರುತ್ತದೆ. ಕವನಗಳಲ್ಲಿ ಪ್ರತಿಫಲಿಸಿರುವ ಚಿಂತನೆಗಳು ಮೌಲ್ಯಾಧಾರಿತ ಬದುಕಿನತ್ತ ಓದುಗರನ್ನು ಕರೆದೊಯ್ಯುತ್ತವೆ ಎಂದರು.

ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅವರು ಕೃತಿ ಪರಿಚಯ ಮಾಡಿ ಮಾತನಾಡಿ, ಭಾಷೆ ಎನ್ನುವುದು ಕೇವಲ ವೃತ್ತಿಯ ವಿಷಯವಲ್ಲ; ಅದು ಮನಸ್ಸಿನ ಅಭಿವ್ಯಕ್ತಿ ಮತ್ತು ಸಂಸ್ಕೃತಿಯ ಪ್ರತೀಕ.  ಸೌಮ್ಯ ಶೆಟ್ಟಿಯವರು ಇಂಗ್ಲಿಷ್ ಭಾಷೆಯನ್ನು ಬೋಧಿಸುವ  ಶಿಕ್ಷಕಿಯಾಗಿದ್ದರೂ ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಸಾಹಿತ್ಯಾಸಕ್ತಿಯನ್ನು ಉಳಿಸಿಕೊಂಡು ಸೃಜನಶೀಲ ಬರವಣಿಗೆಯಲ್ಲಿ ತೊಡಗಿರುವುದು ಪ್ರಶಂಸನೀಯ.  ಕೃತಿಯಲ್ಲಿನ ಹೆಚ್ಚಿನ ಕವನಗಳು ಪ್ರಾಸಬದ್ಧವಾಗಿವೆ. ಮುಂದಿನ ದಿನಗಳಲ್ಲಿ ಕವಯಿತ್ರಿ ಪ್ರಾಸದ ಮಿತಿಯನ್ನು ಮೀರಿ ಭಾಷೆಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸಿದರೆ ಅವರ ಸಾಹಿತ್ಯ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಸಲಹೆ ನೀಡಿದರು.

ಕವಯಿತ್ರಿ ಸೌಮ್ಯ ತಿಲಕ್ ಶೆಟ್ಟಿ ಮಾತನಾಡಿ, ಮಸಿ ಕಾಗದದ ಮೇಲೆ ಮೂಡುವ ಗುರುತಷ್ಟೇ ಅಲ್ಲ, ಅದು ಹೃದಯದ ಮಾತುಗಳಿಗೆ ಜೀವ ನೀಡುವ ಮಾಧ್ಯಮ. ಪ್ರತಿಯೊಂದು ಕವನವೂ ನನ್ನ ಬದುಕಿನ ಅನುಭವ, ಆತ್ಮಸಂವಾದ ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನದ ಪ್ರತಿಬಿಂಬವಾಗಿದೆ. ಓದುಗರ ಮನಸ್ಸಿನಲ್ಲಿ ಹೊಸ ಚಿಂತನೆ, ಸಂವೇದನೆ ಮತ್ತು ಆತ್ಮಾವಲೋಕನ ಮೂಡಿಸುವ ಉದ್ದೇಶದಿಂದ ಈ ಕವನಗಳನ್ನು ರಚಿಸಿದ್ದೇನೆ ಎಂದರು. 

ವಿಶ್ರಾಂತ ಕುಲಸಚಿವ ಡಾ ಬಿ. ಪಿ. ಸಂಪತ್ ಕುಮಾರ್ ಮಾತನಾಡಿ,  ಪ್ರತಿಯೊಬ್ಬ ಕವಿಯ ಸಾಹಿತ್ಯ ಪಯಣದಲ್ಲಿ ಮೊದಲ ಕವನ ಸಂಕಲನವು ಕೇವಲ ಒಂದು ಕೃತಿಯಲ್ಲ, ಅವರ ಸೃಜನಶೀಲ ಬದುಕಿನ ಮೈಲಿಗಲ್ಲಾಗಿರುತ್ತದೆ. ಅದು ಲೇಖಕರ ಸಂವೇದನೆ, ಚಿಂತನೆ ಮತ್ತು ಸಾಹಿತ್ಯದ ದಿಕ್ಕನ್ನು ಪರಿಚಯಿಸುವ ಮಹತ್ವದ ಹೆಜ್ಜೆಯಾಗಿರುತ್ತದೆ ಎಂದರು.

ಹವ್ಯಾಸಿ ಬರಹಗಾರ್ತಿ ಆಶಾ ಅಡೂರು, ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ವಿಜಯಕುಮಾರ್ ಜೈನ್ ಮಾತನಾಡಿದರು. 

ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ಕಾರ‍್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article