ಸಂತ ಫಿಲೋಮಿನಾ ಕಾಲೇಜಿನ ಕೆಡೆಟ್ ಕ್ಯಾಪ್ಟನ್ ದಿಗಂತ್ ವಿ.ಎಸ್. ಅಖಿಲ ಭಾರತ ನೌ ಸೈನಿಕ್ ಕ್ಯಾಂಪ್‌ಗೆ ಆಯ್ಕೆ

ಸಂತ ಫಿಲೋಮಿನಾ ಕಾಲೇಜಿನ ಕೆಡೆಟ್ ಕ್ಯಾಪ್ಟನ್ ದಿಗಂತ್ ವಿ.ಎಸ್. ಅಖಿಲ ಭಾರತ ನೌ ಸೈನಿಕ್ ಕ್ಯಾಂಪ್‌ಗೆ ಆಯ್ಕೆ


ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಎನ್‌ಸಿಸಿ ನೌಕಾದಳ ವಿಭಾಗದ ಕೆಡೆಟ್ ಕ್ಯಾಪ್ಟನ್ ದಿಗಂತ್ ವಿ.ಎಸ್. ಅವರು 2026ನೇ ಸಾಲಿನ ಪ್ರತಿಷ್ಠಿತ ಅಖಿಲ ಭಾರತ ನೌ ಸೈನಿಕ್ ಕ್ಯಾಂಪ್ (All India Nau Sainik Camp-AINSC)ಗೆ ಆಯ್ಕೆಯಾಗಿದ್ದಾರೆ. ಅವರು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಲಿದ್ದಾರೆ.

ದೇಶದ ಎನ್‌ಸಿಸಿ ನೌಕಾದಳ ವಿಭಾಗದ ಅತ್ಯುನ್ನತ ತರಬೇತಿ ಹಾಗೂ ಸ್ಪರ್ಧಾತ್ಮಕ ಶಿಬಿರವೆಂದು ಪರಿಗಣಿಸಲ್ಪಡುವ ಈ ಕ್ಯಾಂಪ್ ಮಹಾರಾಷ್ಟ್ರದ ಲೋಣಾವಳಾದ ಐಎನ್‌ಎಸ್ ಶಿವಾಜಿನಲ್ಲಿ ಜೂನ್ 30ರಿಂದ ಜುಲೈ 10ರವರೆಗೆ ನಡೆಯಲಿದೆ.

ಗ್ರೂಪ್ ಮಟ್ಟ ಹಾಗೂ ನಿರ್ದೇಶನಾಲಯ ಮಟ್ಟದಲ್ಲಿ ನಡೆದ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದಿಗಂತ್ ಅವರು ನೌಕಾ ಕೌಶಲ್ಯ, ಶಿಸ್ತು, ನಾಯಕತ್ವ ಮತ್ತು ತಂಡದ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಹಿನ್ನೆಲೆಯಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಶಿಬಿರದಲ್ಲಿ ಬೋಟ್ ಪುಲ್ಲಿಂಗ್, ಬೋಟ್ ರಿಗ್ಗಿಂಗ್, ಶಿಪ್ ಮಾಡೆಲಿಂಗ್, ಡ್ರಿಲ್, ಸೆಮಾಫೋರ್, ಗಂಟು ಕಟ್ಟುವಿಕೆ (ನಾಟ್ ಟೈಯಿಂಗ್) ಹಾಗೂ ಸರ್ವಿಸ್ ಸಬ್ಜೆಕ್ಟ್ ಪರೀಕ್ಷೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ದೇಶದ ವಿವಿಧ ಎನ್‌ಸಿಸಿ ನಿರ್ದೇಶನಾಲಯಗಳಿಂದ ಆಗಮಿಸುವ ಶ್ರೇಷ್ಠ ಕೆಡೆಟ್‌ಗಳು ಭಾಗವಹಿಸಲಿದ್ದಾರೆ.

ದಿಗಂತ್ ಅವರ ಆಯ್ಕೆ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಕರ್ನಾಟಕ-ಗೋವಾ ನಿರ್ದೇಶನಾಲಯ ಹಾಗೂ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಎನ್‌ಸಿಸಿ ನೌಕಾದಳ ವಿಭಾಗದ ಗುಣಮಟ್ಟದ ತರಬೇತಿಗೆ ದೊರೆತ ಮಾನ್ಯತೆಯಾಗಿದೆ.

ಕಾಲೇಜಿನ ಪ್ರಾಂಶುಪಾಲರು ದಿಗಂತ್ ಅವರ ಸಾಧನೆಯನ್ನು ಅಭಿನಂದಿಸಿದ್ದು, ಎನ್‌ಸಿಸಿ ನೌಕಾದಳ ವಿಭಾಗದ ಅಧಿಕಾರಿ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಕೆ. ಅವರ ಮಾರ್ಗದರ್ಶನವನ್ನು ಶ್ಲಾಘಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article