ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿ ಸ್ವಾಗತ ಕಾರ್ಯಕ್ರಮ
Tuesday, June 30, 2026
ಪುತ್ತೂರು: ಶೈಕ್ಷಣಿಕ ವರ್ಷದ ಆರಂಭದೊಂದಿಗೆ ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ಸ್ವಾಗತ ಕಾರ್ಯಕ್ರಮ ಎಸ್‌ಜೆಎಮ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ವಂ. ಫಾ. ಡಾ. ಜೆ.ಬಿ. ಸಲ್ಡಾನ್ಹಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾವು ನಮ್ಮ ದೇಶದಲ್ಲೇ ಕೆಲಸವನ್ನು ಹುಡುಕಬೇಕು, ಬುದ್ಧಿವಂತರಾಗಿರಬೇಕು, ಸ್ಪರ್ಧಾತ್ಮಕ ಸಮಾಜದಲ್ಲಿ ಕೆಲಸ ಮಾಡಬೇಕು, ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ನೀವು ನಿಜವಾಗಿಯೂ ಎಲ್ಲಿಗೆ ಹೋಗಲು ಬಯಸುತ್ತೀರಿ ಮತ್ತು ಏನನ್ನು ಸಾಧಿಸಲು ಬಯಸುತ್ತೀರಿ ಎಂಬ ದಿಕ್ಕನ್ನು ನೀವೇ ಆರಿಸಿಕೊಳ್ಳಬೇಕು. ಶಿಕ್ಷಣವು ಜ್ಞಾನವನ್ನು ವಿಸ್ತರಿಸುವುದಾಗಿದೆ. ನಮ್ಮ ಕುಟುಂಬವು ಪಾಲಿಸುವ ಸಂಸ್ಕೃತಿ ಮತ್ತು ಉತ್ತಮ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮ್ಮ ಪೋಷಕರು ನಿಜವಾಗಿಯೂ ಪ್ರಾಮಾಣಿಕ ವ್ಯಕ್ತಿಗಳು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೋ ಅವರು, ಕಾಲೇಜು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತದೆ, ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ. ಕಾಲೇಜು ನಿಮ್ಮೆಲ್ಲರನ್ನೂ ವಿದ್ಯಾರ್ಥಿಗಳಾಗಿ ಗುರುತಿಸುತ್ತದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆಯ ಮಾನವರನ್ನಾಗಿ ಹಾಗೂ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತದೆ. ನಿಮ್ಮನ್ನು ಈ ಸಂಸ್ಥೆಗೆ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಕ್ಯಾಂಪಸ್‌ಗೆ ತನ್ನದೇ ಆದ ಸಂಸ್ಕೃತಿ ಮತ್ತು ಸುದೀರ್ಘ ಪರಂಪರೆಯಿದೆ. ನಿಮ್ಮ ಕಡೆಯಿಂದ ಸೂಕ್ತವಾದ ಹಾಗೂ ಸಮಗ್ರವಾದ ಬೆಳವಣಿಗೆಯನ್ನು ನಾನು ಬಯಸುತ್ತೇನೆ. ನಿಮಗೆ ನೀಡಲಾಗುವ ಕಲಿಕೆಯನ್ನು ನೀವು ಸ್ವೀಕರಿಸಿದರೆ, ಎಲ್ಲಾ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದರೆ, ಉನ್ನತ ಶಿಕ್ಷಣಕ್ಕೆ ಒಂದು ಅದ್ಭುತ ಮೌಲ್ಯ ಸಿಗುತ್ತದೆ ಎಂದು ಹೇಳಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಅವರು ಶೈಕ್ಷಣಿಕ ಮಾಹಿತಿ ಮತ್ತು ಸ್ವಾಯತ್ತತೆಯ ಸ್ಥಿತಿಗತಿಯ ಅವಲೋಕನದ ಬಗ್ಗೆ ಹಾಗೂ ಪತ್ರಾವೋ ಆಸ್ಪತ್ರೆಯ ಅಧಿಕಾರಿಗಳು ನಶಾ ಮುಕ್ತ ಭಾರತದ ಕುರಿತು ಮತ್ತು ಪೊಲೀಸ್ ಇಲಾಖೆಯವರು ಸೈಬರ್ ಕ್ರೈಂ ಕುರಿತು ಮಾಹಿತಿ ನೀಡಿದರು.
ಎಂ.ಕಾಂ. ಪ್ರಾಧ್ಯಪಕಿ ಶ್ರೀರಾಗ ಪ್ರಾರ್ಥಿಸಿದರು. ಎಸ್‌ಐಪಿ ಸಂಚಾಲಕ ಡಾ. ಎಡ್ವಿನ್ ಡಿಸೋಜಾ ಸ್ವಾಗತಿಸಿ, ವಂದಿಸಿದರು. ಡಾ. ಡಿಂಪಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

