ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’
Saturday, June 27, 2026
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಸನಾತಕೋತ್ತರ ಸಭಾಭವನದಲ್ಲಿ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಯುವಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ದೇಶದ ಭವಿಷ್ಯ ಯುವಜನತೆಯ ಕೈಯಲ್ಲಿದ್ದು, ಆರೋಗ್ಯಕರ ಜೀವನಶೈಲಿ, ಉತ್ತಮ ಮೌಲ್ಯಗಳು ಹಾಗೂ ಜವಾಬ್ದಾರಿಯುತ ನಡವಳಿಕೆಯಿಂದ ಸಮಾಜಕ್ಕೆ ಮಾದರಿಯಾಗಬೇಕೆಂದು ಅವರು ತಿಳಿಸಿ, ಬಳಿಕ ಅವರು ‘ನಶಾ ಮುಕ್ತ ಭಾರತ’ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಪ್ರಥಮ ಎಂಸಿಎ ತರಗತಿಯ ಜೆವಿಟಾ ಮತ್ತು ಬಳಗದವರು ಪ್ರಾರ್ಥಿಸಿ, ಕಾಲೇಜಿನ ಡ್ಯಾಪ್ಸ್ ಘಟಗದ ಸಂಯೋಜಕರೂ ಐಕ್ಯುಎಸಿಯ ಸಂಯೋಜಕರೂ ಆದ ಡಾ. ಎಡ್ವಿನ್ ಎಸ್. ಡಿ’ಸೋಜ ಸ್ವಾಗತಿಸಿ, ನಶಾಮುಕ್ತ ಭಾರತ ಅಭಿಯಾನದ ಕುರಿತು ವಿವರಣೆ ನೀಡಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ವಂದಿಸಿ, ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ. ನಿರೂಪಿಸಿದರು.
