ಗೃಹಲಕ್ಷ್ಮೀ ಭಾಗ್ಯ-ಲಕ್ಷಾಂತರ ಮಹಿಳೆಯರ ಮೇಲೆ ಸರ್ಜಿಕಲ್ ಸ್ಟ್ರೈಕ್: ಶಾಸಕ ಡಾ. ಭರತ್ ಶೆಟ್ಟಿ ಕಿಡಿ
"ಗೃಹಲಕ್ಷ್ಮೀ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್, ಈಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳ 5,000 ಕೋಟಿ ರೂ. ಹಣವನ್ನು ನೀಡದೆ ಲಕ್ಷಾಂತರ ಫಲಾನುಭವಿಗಳಿಗೆ ಅನ್ಯಾಯ ಮಾಡಿದೆ" ಎಂದು ಆರೋಪಿಸಿದ್ದಾರೆ.
"ಸರ್ಕಾರ ಈಗ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆ, ತನಿಖೆ ನೆಪದಲ್ಲಿ ಯೋಜನೆಯನ್ನು ಕಡಿತಗೊಳಿಸಲು ಹೊರಟಿದೆ. 1.48 ಲಕ್ಷ ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎಂಬ ಕಾರಣ ನೀಡಿ, ನೈಜ ಫಲಾನುಭವಿಗಳನ್ನೇ ಯೋಜನೆಯಿಂದ ಕೈಬಿಡುವ ಹುನ್ನಾರ ನಡೆದಿದೆ" ಎಂದು ಭರತ್ ಶೆಟ್ಟಿ ದೂರಿದರು.
ನಿಕಟಪೂರ್ವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರಂಭದಲ್ಲಿ "ಆಗಸ್ಟ್‌ವರೆಗೆ ಎಲ್ಲಾ ಕಂತು ಪಾವತಿಯಾಗಿದೆ" ಎಂದು ತಪ್ಪು ಮಾಹಿತಿ ನೀಡಿ, ನಂತರ ಎರಡು ಕಂತು ಬಾಕಿ ಇದೆ ಎಂದು ಒಪ್ಪಿಕೊಂಡಿದ್ದರು.
"1.26 ಕೋಟಿ ಮಹಿಳೆಯರಿಗೆ ತಿಂಗಳಿಗೆ 2,000 ರೂ. ಅಂದರೆ ಎರಡು ತಿಂಗಳಿಗೆ 5,000 ಕೋಟಿ ರೂ. ಆಗುತ್ತದೆ. ಈ ಹಣ ಎಲ್ಲಿ ಹೋಯಿತು ಎಂದು ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.