ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಗೆ ಹಸಿರು ಇಂಧನ ದಕ್ಷತೆಗಾಗಿ ‘ರಾಷ್ಟ್ರೀಯ ಪ್ರಶಸ್ತಿ’
Tuesday, June 23, 2026
ಉಡುಪಿ: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಸುಸ್ಥಿರ ಆರೋಗ್ಯ ಸೇವೆಗಳನ್ನು ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಾಗಿ ಆರೋಗ್ಯ ಮತ್ತು ಪರಿಸರ ನಾಯಕತ್ವ ವೇದಿಕೆ (ಹೆಲ್ಪ್ ಸಂಸ್ಥೆ) ವತಿಯಿಂದ ಕೊಡಮಾಡುವ 2026ರ ಹೆಲ್ಪ್ ಸುಸ್ಥಿರತಾ ಶ್ರೇಷ್ಟತಾ ಪ್ರಶಸ್ತಿ ‘ಅತ್ಯುತ್ತಮ ಹಸಿರು ಇಂಧನ ದಕ್ಷತಾ ಕ್ರಮಗಳು’ ವಿಭಾಗದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಆಸ್ಪತ್ರೆಯ ನಿರ್ದೇಶಕ ಡಾ. ಸುಶಿಲ್ ಜತನ್ನಾ ಅವರು ಜೂ.20 ರಂದು ಹೈದರಾಬಾದ್‌ನ ಹೈಟೆಕ್ ಸಿಟಿಯ ಯಶೋದ ಆಸ್ಪತ್ರೆಯಲ್ಲಿ ನಡೆದ ಹೆಲ್ಪ್ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಜಾಗತಿಕ ಹಸಿರುಮನೆ ಅನಿಲಗಳ ಒಟ್ಟು ಹೊರಸೂಸುವಿಕೆಯಲ್ಲಿ ಆರೋಗ್ಯ ಕ್ಷೇತ್ರದ ಪಾಲು ಅಂದಾಜು ಶೇ.4.5 ರಿಂದ 5ರಷ್ಟಿದ್ದು, ಪರಿಸರ ಸುಸ್ಥಿರತೆ ಇಂದು ವಿಶ್ವದಾದ್ಯಂತ ಆರೋಗ್ಯ ಸಂಸ್ಥೆಗಳ ಪ್ರಮುಖ ಆದ್ಯತೆಯ ವಿಷಯವಾಗಿದೆ. ಪರಿಸರದ ಮೇಲಿನ ತಮ್ಮ ಪ್ರಭಾವವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಅನೇಕ ಆಸ್ಪತ್ರೆಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಅನುಸಾರ ತಮ್ಮ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಳ್ಳುತ್ತಿವೆ.
ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನದ ಬಳಕೆ ಹಾಗೂ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಅತ್ಯುತ್ತಮ ನಾಯಕತ್ವ ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ತೋರಿದ ಆಸ್ಪತ್ರೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪರಿಸರದ ಮೇಲಿನ ಪರಿಣಾಮ, ನಾವೀನ್ಯತೆ, ಸಾಂಸ್ಥಿಕ ಬದ್ಧತೆ, ವಿಸ್ತರಣಾ ಸಾಮರ್ಥ್ಯ ಹಾಗೂ ಆಡಳಿತ ವ್ಯವಸ್ಥೆ ಮೊದಲಾದ ಅಂಶಗಳ ಆಧಾರದಲ್ಲಿ ಆಸ್ಪತ್ರೆಯ ಮೌಲ್ಯಮಾಪನ ಮಾಡಲಾಯಿತು.
ಆರೋಗ್ಯ ಸೇವೆಗಳ ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಡಾ. ಸುಶಿಲ್ ಜತನ್ನಾ ಅವರ ನೇತೃತ್ವದಲ್ಲಿ 2024ರ ಜೂನ್‌ನಲ್ಲಿ ಆರಂಭಿಸಲಾದ ‘ಇನ್‌ಸ್ಪೈರ್’ ಹಸಿರು ಆಸ್ಪತ್ರೆ ಯೋಜನೆಯ ಅನುಷ್ಠಾನದ ಬಳಿಕ ಈ ಮಾನ್ಯತೆ ದೊರೆತಿದೆ. ಈ ಯೋಜನೆಯಡಿ ಆಸ್ಪತ್ರೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಕಾರ್ಬನ್ ಹೆಜ್ಜೆಗುರುತು ಮೌಲ್ಯಮಾಪನ ನಡೆಸಲಾಗಿದೆ. ಇಂಧನ ಹಾಗೂ ನೀರಿನ ಸಂರಕ್ಷಣಾ ಕ್ರಮಗಳನ್ನು ಜಾರಿಗೊಳಿಸುವುದರ ಜೊತೆಗೆ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆಯನ್ನು ಬಲಪಡಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಹಸಿರೀಕರಣ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಉತ್ತೇಜನ ನೀಡಲಾಗಿದ್ದು, ಹವಾಮಾನ ಬದಲಾವಣೆ ಹಾಗೂ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
1923ರಲ್ಲಿ ಸ್ವಿಸ್ ಮೂಲದ ಮಿಷನರಿ ವೈದ್ಯೆ ಡಾ. ಇವಾ ಲೊಂಬಾರ್ಡ್ ಸ್ಥಾಪಿಸಿದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಕರಾವಳಿ ಕರ್ನಾಟಕದ ಮುಂಚೂಣಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ಮಾನ್ಯತಾ ಮಂಡಳಿ (ಎನ್‌ಎಬಿಹೆಚ್)ನ ಮಾನ್ಯತೆ ಪಡೆದಿರುವ ಈ ಆಸ್ಪತ್ರೆಯು ವಿವಿಧ ಪ್ರಮುಖ ವೈದ್ಯಕೀಯ ವಿಭಾಗಗಳು ಮತ್ತು ಆರೋಗ್ಯ ಸೌಲಭ್ಯಗಳ ಮೂಲಕ ಸೇವೆ ಸಲ್ಲಿಸುತ್ತಿದೆ.
ಈ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಡಾ. ಸುಶಿಲ್ ಜತನ್ನಾ ಅವರು, ಪರಿಸರದ ಬಗ್ಗೆ ಜವಾಬ್ದಾರಿಯುತ ಆರೋಗ್ಯ ಸೇವೆ ಒದಗಿಸುವ ನಮ್ಮ ಬದ್ಧತೆಗೆ ಈ ಪ್ರಶಸ್ತಿ ಹೆಮ್ಮೆಯ ಮಾನ್ಯತೆಯಾಗಿದೆ ಎಂದು ಹೇಳಿದರು.
ಇನ್‌ಸ್ಪೈರ್ ಹಸಿರು ಆಸ್ಪತ್ರೆ ಯೋಜನೆಯನ್ನು ಯಶಸ್ವಿಗೊಳಿಸುವಲ್ಲಿ ನೆಲಮಟ್ಟದಲ್ಲಿ ಶ್ರಮಿಸಿದ ಆಸ್ಪತ್ರೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರ ಸಹಯೋಗಿಗಳ ಕೊಡುಗೆಯನ್ನು ಶ್ಲಾಘಿಸಿದ ಅವರು, ಸುಸ್ಥಿರತೆಯ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಲು ನೆರವಾದ ಸ್ವಿಟ್ಜರ್‌ಲೆಂಡ್‌ನ ಲೊಂಬಾರ್ಡ್ ಪ್ರತಿಷ್ಠಾನ ಹಾಗೂ ಅದರ ಸಲಹೆಗಾರರ ಸಹಕಾರವನ್ನೂ ಅವರು ಸ್ಮರಿಸಿದರು. ಮುಂದಿನ ದಿನಗಳಲ್ಲಿಯೂ ತನ್ನ ಸುಸ್ಥಿರತಾ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಆಸ್ಪತ್ರೆ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಹೆಲ್ಪ್ ಸಂಸ್ಥೆಯು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ ಹಾಗೂ ಹೆಲ್ತ್ ಕೇರ್ ವಿಥೌಟ್ ಹರ್ಮ್ ಸಹಯೋಗದೊಂದಿಗೆ ಸ್ಥಾಪಿಸಲ್ಪಟ್ಟ ಜ್ಞಾನ ಹಂಚಿಕೆ ಮತ್ತು ನೆಟ್‌ವಕಿಂಗ್ ವೇದಿಕೆಯಾಗಿದೆ. ಇದು ಗ್ಲೋಬಲ್ ಗ್ರೀನ್ ಅಂಡ್ ಹೆಲ್ದಿ ಹಾಸ್ಪಿಟಲ್ಸ್ ಎಂಬ ಜಾಗತಿಕ ಜಾಲದ ಭಾರತದ ಘಟಕವಾಗಿದ್ದು, 80ಕ್ಕೂ ಹೆಚ್ಚು ದೇಶಗಳಲ್ಲಿ 70,000ಕ್ಕೂ ಅಧಿಕ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ವ್ಯವಸ್ಥೆಗಳನ್ನು ಪ್ರತಿನಿಧಿಸುವ 2,000ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿರುವ ಜಾಗತಿಕ ಚಳವಳಿಯಾಗಿದೆ.










