ಸ್ವಚ್ಛ ಮನಸ್ಸಿನಿಂದ ಸ್ವಸ್ಥ ಸಮಾಜ ನಿರ್ಮಾಣ: ಅನಿಲ್ ಕುಮಾರ್ ಭೂಮರೆಡ್ಡಿ

ಸ್ವಚ್ಛ ಮನಸ್ಸಿನಿಂದ ಸ್ವಸ್ಥ ಸಮಾಜ ನಿರ್ಮಾಣ: ಅನಿಲ್ ಕುಮಾರ್ ಭೂಮರೆಡ್ಡಿ


ಉಜಿರೆ: ಮಾದಕ ವಸ್ತು ಸೇವನೆ ನಮ್ಮ ಅರೋಗ್ಯ, ಭವಿಷ್ಯ. ವ್ಯಕ್ತಿ, ಕುಟುಂಬ, ದೇಶದ ಭವಿಷ್ಯ ನಾಶ ಮಾಡುತ್ತದೆ. ಕ್ಷಣಿಕ ಸುಖದ ಭ್ರಮಾಲೋಕದಲ್ಲಿ ಬರಬರುತ್ತ ಕಾಯಿಲೆಗಳು ನಮ್ಮನ್ನು ಮಲಗಿಸುತ್ತವೆ. ಅದರ ದುಷ್ಪರಿಣಾಮಗಳ ಅರಿವು ನಮಗಿರಬೇಕು. ಇತರರಲ್ಲೂ ಅದರ ಅರಿವು ಮೂಡಿಸುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಹೇಳಿದರು.

ಅವರು ಜೂ.25 ರಂದು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್ ಮತ್ತು ರೆಂಜೆರ್ಸ್ ಘಟಕಗಳು ಹಾಗೂ ದ.ಕ. ಜಿಲ್ಲಾ ಪೊಲೀಸ್ ಬೆಳ್ತಂಗಡಿ ಉಪವಿಭಾಗದ ಸಹಭಾಗಿತ್ವದಲ್ಲಿ ನಡೆದ ಮಾದಕ ದೃವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತಾರಾಷ್ಟ್ರಿಯ ದಿನದ ಸಲುವಾಗಿ ಬೃಹತ್ ಜಾಗೃತಿ ಕಾರ್ಯಕ್ರಮ ‘ನಶಾ ಮುಕ್ತ ಭಾರತ’ ಜಾಥಾ ಮತ್ತು ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಯುವ ಸಮುದಾಯ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿಯಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ  ಹಾಕಬೇಕಾಗಿದೆ. ನಶೆಯಿಂದ ಜೀವನ ಪೂರ್ತಿ ಹಾಳುಮಾಡಿಕೊಳ್ಳುವ ಯುವ ಸಮುದಾಯ ಅದರ ಉಗ್ರತೆ, ದುಷ್ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಡ್ರಗ್ಸ್ ತಡೆಗಟ್ಟುವಲ್ಲಿ ಯುವಕರ ಪಾತ್ರ ಮಹತ್ವಪೂರ್ಣವಾದುದು. ಸ್ವಚ್ಛ ಮನಸ್ಸಿನಿಂದ ಸ್ವಸ್ಥ ಸಮಾಜ ನಿರ್ಮಾಣಗೊಳ್ಳುವುದು ಎಂದರು.

ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾತನಾಡಿ, ಯುವಜನಾಂಗ ಅಂತರ್ಮುಖಿ ಮನಸ್ಥಿತಿಯಿಂದ ಮಾದಕ ವಸ್ತು ಸೇವನೆಗೆ ತೊಡಗಿಸಿಕೊಳ್ಳುತ್ತಾರೆ. ನಮ್ಮ ದೈಹಿಕ ಅರೋಗ್ಯ, ಮಾನಸಿಕ ಅರೋಗ್ಯ ಪ್ರಾಮುಖ್ಯವಾಗಿದ್ದು, ಅದು ಹದಗೆಟ್ಟರೆ ಸಮಾಜಕ್ಕೂ ತೊಂದರೆ. ದೇಶದ ಭವಿಷ್ಯ ನಮ್ಮ ಕನಸು. ಯುವಜನಾಂಗ ಡ್ರಗ್ಸ್, ಮೊಬೈಲ್‌ನಿಂದ ಆದಷ್ಟು ದೂರವಿರಬೇಕು. ದೇಶದ ಭವಿಷ್ಯದಲ್ಲಿ ಯುವ ಜನತೆಯ ಪಾತ್ರ ಮುಖ್ಯವಾದುದು. 2047ರಲ್ಲಿ ಭಾರತ ಸೂಪರ್ ಪವರ್ ದೇಶವಾಗುವ ಕನಸು ಈಡೇರಿಸಲು ಆರ್ಥಿಕ ಭದ್ರತೆ, ಯುವ ಶಕ್ತಿ ಜಾಗೃತವಾಗಬೇಕು. ದೇಶ ಸುಸ್ಥಿರವಾಗಲು ದೇಶದ ಜನಸಂಖ್ಯಾ ಪ್ರಮಾಣ ಅಧಿಕಗೊಳ್ಳಬೇಕು. ಡ್ರಗ್ಸ್ ಸೇವನೆಯಿಂದ ನಮ್ಮ ಆಯುಸ್ಸು ಅರ್ಧ ಕಡಿಮೆಯಾಗುತ್ತದೆ. ಎಲ್ಲರೂ ಕಟಿಬದ್ಧರಾಗಿ ದೇಶಸೇವೆಯಲ್ಲಿ ಸಕ್ರಿಯರಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಚಾರ್ಯ ಪ್ರೊ. ಪಿ. ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಅಸೆ, ಆಮಿಷಗಳಿಗೆ ಬಲಿಯಾಗಬಾರದು. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಂತಹ ಯಾವುದೇ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದೆ ಪರಿಸರಕ್ಕೆ ಮಾರ್ಗದರ್ಶನ ನೀಡುವರೆಂಬ ನಂಬಿಕೆ, ವಿಶ್ವಾಸವಿದೆ. ಸಂವಿದಾನದಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ದೇಶ ರಾಮರಾಜ್ಯವಾಗಲು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ, ನಾಯಕರಾಗಿ ನಶಾಮುಕ್ತವಾಗಲು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೆಲಸ ಮಾಡಿ ಉತ್ತಮ ನಾಗರಿಕರಾಗಿ ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿಜ್ಞಾಬದ್ಧರಾಗಬೇಕು ಎಂದರು.

ಬೃಹತ್ ಜಾಥಾವನ್ನು ಉದ್ಘಾಟಿಸಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಯುವಕರು ಆರೋಗ್ಯಪೂರ್ಣ ಜೀವನ ಕಟ್ಟಿಕೊಳ್ಳಬೇಕು. ಹಿರಿಯರು ಮತ್ತು ಪೋಷಕರ ಮಾರ್ಗದರ್ಶನದಿಂದ ಯುವ ಸಮುದಾಯ ದುಶ್ಚಟಮುಕ್ತರಾಗಿ ಸನ್ಮಾರ್ಗದಲ್ಲಿ ನಡೆದು. ಸಮಾಜ ಹಾಗೂ ದೇಶದ ಆಸ್ತಿಗಳಾಗಬೇಕು  ನಕಾರತ್ಮಕ ಚಿಂತನೆಗಳಿಗೆ ಮನಸ್ಸು ಮಾಡದೇ ಸಕಾರಾತ್ಮಕ ಯೋಚನೆಗಳಿಂದ ನಶಾಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳ ಬೃಹತ್ ಜಾಥಾ ಕಾಲೇಜಿನಿಂದ ಉಜಿರೆ ಮುಖ್ಯ ವೃತ್ತದವೆರೆಗೆ ಸಾಗಿ ಘೋಷಣೆ ಕೂಗುತ್ತ ಮರಳಿ ಕಾಲೇಜು ತಲುಪಿತು. ಸಾವಿರಾರು ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಅನಿಲ್ ಕುಮಾರ್ ಭೂಮರೆಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು.

ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ ಆನಂದ್ ಎಂ. ಮತ್ತು ಸಿಕಂದರ್ ಪಾಷ ಉಪಸ್ಥಿತರಿದ್ದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು. ಎನ್‌ಸಿಸಿ ನೌಕಾ ವಿಭಾಗದ ಸಬ್ ಲೆಫ್ಟಿನೆಂಟ್ ಹರೀಶ್ ಶೆಟ್ಟಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article