ಎನ್‌ಡಿಆರ್‌ಎಫ್ ಯೋಧರಿಂದ ಪ್ರಥಮ ಪ್ರತಿಕ್ರಿಯೆ ತರಬೇತಿ
Tuesday, June 23, 2026
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಚಿಸಲಾದ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಗಳ ಸಂಯೋಜಕರು, ಘಟಕ ಪ್ರತಿನಿಧಿಗಳು, ಮಾಸ್ಟರ್, ಕ್ಯಾಪ್ಟನ್ ಮತ್ತು ತುರ್ತು ಸ್ಪಂದನಾ ತಂಡದ ಸದಸ್ಯರಿಗೆ ಎನ್‌ಡಿಆರ್‌ಎಫ್ ಯೋಧರಿಂದ ಪ್ರಥಮ ಪ್ರತಿಕ್ರಿಯೆ ತರಬೇತಿಯು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾ ಭವನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆರಂಭಿಸಲಾದ ವಿಪತ್ತು ನಿರ್ವಹಣಾ ಕಾರ್ಯಕ್ರಮವು ಲೋಕಾರ್ಪಣೆಗೊಂಡು ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶೌರ್ಯ ಸ್ವಯಂಸೇವಕರು ಪಾಕೃತಿಕ ವಿಪತ್ತುಗಳ ಸಮಯದಲ್ಲಿ ಆಪತ್ತಿನಲ್ಲಿ ಇರುವವರಿಗೆ ಸಕಾಲದಲ್ಲಿ ಸ್ಪಂದಿಸಿ ನೆರವಾಗುತ್ತಿದ್ದಾರೆ. ಸಾಮಾಜಿಕ ಸೇವೆಗಳ ಮೂಲಕ ಜನರಿಗೆ ಆಪ್ತರಾಗಿದ್ದಾರೆ. ವಿಪತ್ತು ನಿರ್ವಹಣೆಯ ಸಮಯದಲ್ಲಿ ಸ್ವಯಂಸೇವಕರು ತಮ್ಮ ರಕ್ಷಣೆಯನ್ನು ನೋಡಿಕೊಳ್ಳಬೇಕು ಎಂದು ಹೇಳಿದರು.
ಡಾ. ಹೇಮಾವತಿ ವಿ. ಹೆಗ್ಗಡೆ ಅವರು ತಾಲ್ಲೂಕು ಸಮಿತಿಯ ಮಾಸ್ಟರ್ ಮತ್ತು ಕ್ಯಾಪ್ಟನ್‌ರಿಗೆ ಹಣ್ಣಿನ ಗಿಡಗಳನ್ನು ವಿತರಣೆ ಮಾಡಿ ಸಾಮಾಜಿಕ ಕಳಕಳಿ ಹೊಂದಿರುವ ಸ್ವಯಂಸೇವಕರ ಚಟುವಟಿಕೆಗಳಿಗೆ ಮೆಚ್ಚುಗೆ ಸೂಚಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ವಿಪತ್ತು ನಿರ್ವಹಣಾ ಸ್ವಯಂಸೇವಕರು ರಾಜ್ಯದ 91 ತಾಲ್ಲೂಕುಗಳಲ್ಲಿ 7704 ಮಂದಿ ಇದ್ದು ನಾಲ್ಕು ಲಕ್ಷಕ್ಕೂ ಅಧಿಕ ಸೇವಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಅಗ್ನಿಶಾಮಕದಳ, ಪೊಲೀಸ್ ಇಲಾಖೆ, ಎನ್.ಡಿ.ಆರ್.ಎಫ್. ಸಂಸ್ಥೆಗಳ ಜೊತೆಗೆ ಕಾರ್ಯ ತತ್ಪರರಾಗಿದ್ದಾರೆ. ಬಡವರಿಗೆ ಮನೆ ನಿರ್ಮಾಣ, ರಸ್ತೆ ರಿಪೇರಿ, ಗಿಡ ನಾಟಿಯಂತಹ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದ ಅವರು ಸ್ವಯಂಸೇವಕರು ಇತರರ ಒಳಿತನ್ನು ಬಯಸುವವರಾಗಿದ್ದಾರೆ. ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.
ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್ ಶಾಂತಿಲಾಲ್ ಜತಿಯ ಮತ್ತು ತಂಡದವರು ವಿಪತ್ತಿನ ಸಂದರ್ಭದಲ್ಲಿ ಪ್ರಥಮ ಸ್ಪಂದನೆ ಕುರಿತು ತರಬೇತಿ ನೀಡಿದರು. ಕಟ್ಟಡ ಕುಸಿತದ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆ, ಪ್ರವಾಹ ಸಂದರ್ಭದಲ್ಲಿ ಕಾರ್ಯಾಚರಣೆ, ಬೆಂಕಿ ಅವಘಡ ಸಂದರ್ಭದಲ್ಲಿ ಕಾರ್ಯಾಚರಣೆ, ಹಗ್ಗದ ಸಹಾಯದಿಂದ ರಕ್ಷಣೆ, ವಿಪತ್ತು ನಿರ್ವಹಣಾ ಪರಿಕರಗಳ ಬಳಕೆ ಮುಂತಾದವುಗಳ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ ನೀಡಿದರು.
ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋಧರ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ತಾಲ್ಲೂಕಿನ 200 ಸ್ವಯಂಸೇವಕರು ಭಾಗವಹಿಸಿದ್ದರು.
.jpg)
.jpg)


