ಚರಂಡಿಗೆ ಬಿದ್ದ ಬಸ್: ಸ್ಕೂಟರ್ ಸವಾರ ಇಂಪೋಸಿಸ್‌ನ ಉದ್ಯೋಗಿ ಸಾವು, ಸಹಸವಾರೆ ಪ್ರಾಣಾಪಾಯದಿಂದ ಪಾರು

ಚರಂಡಿಗೆ ಬಿದ್ದ ಬಸ್: ಸ್ಕೂಟರ್ ಸವಾರ ಇಂಪೋಸಿಸ್‌ನ ಉದ್ಯೋಗಿ ಸಾವು, ಸಹಸವಾರೆ ಪ್ರಾಣಾಪಾಯದಿಂದ ಪಾರು


ಉಳ್ಳಾಲ: ವಿದ್ಯಾರ್ಥಿಗಳನ್ನು ಹೊತ್ಯೊಯ್ಯುತ್ತಿದ್ದ ಖಾಸಗಿ ಇಂಜಿನಿಯರಿಂಗ್ ಕಾಲೇಜು ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಬಿದ್ದ ಪರಿಣಾಮ ಬಸ್ಸಿನಡಿಯಲ್ಲಿ ಸಿಲುಕಿದ್ದ ಸ್ಕೂಟರ್ ಚಾಲಕ ಯುವಕನೋರ್ವ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ದೇರಳಕಟ್ಟೆ ಸಮೀಪದ ನಾಟೆಕಲ್ ತಿರುವಿನಲ್ಲಿ ನಡೆದಿದೆ.

ಮುಡಿಪು, ಕಂಬಳಪದವಿನ ಇಂಪೋಸಿಸ್‌ನ ಉದ್ಯೋಗಿ ಚಿಕ್ಕಮಂಗಳೂರು ಮೂಲದ ನಿವಾಸಿ ಪ್ರಜ್ವಲ್ ಅರ್ನಾಲ್ಡ್ (30) ಸಾವನ್ನಪ್ಪಿರುವ ಯುವಕನಾಗಿದ್ದಾನೆ.

ಪ್ರಜ್ವಲ್ ತನ್ನ ಸಹೋದ್ಯೋಗಿ ಯುವತಿ ಸಾಗರದ ನಿವಾಸಿ ಅಕ್ಷತಾಲೊಂದಿಗೆ ಇಂದು ಸಂಜೆ ಸ್ಕೂಟರಲ್ಲಿ ಕಂಬಳ ಪದವಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ನಡುಪದವಿನ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ್ದು, ಈ ವೇಳೆ ಬಸ್ಸಿನಡಿಗೆ ಸ್ಕೂಟರ್ ಕೂಡ ಸಿಲುಕಿಕೊಂಡಿದೆ.

ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ತಕ್ಷಣ ಕ್ರೇನ್ ತರಿಸಿ ಬಸ್ಸನ್ನು ಮೇಲಕ್ಕೆತ್ತಿದ್ದು, ಸ್ಕೂಟರ್ ಸವಾರ ಪ್ರಜ್ವಲ್ ಮತ್ತು ಅಕ್ಷತಾರನ್ನು ಹೊರಗೆಳೆದು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಹ್ಯವಾಗಿ ದೇಹದಲ್ಲಿ ಗಂಭೀರ ಗಾಯಗಳಿಲ್ಲದಿದ್ದರೂ ಸಹ ಆಂತರಿಕ ಅಂಗಗಳ ನಿಷ್ಕ್ರಿಯತೆಯಿಂದಾಗಿ ಪ್ರಜ್ವಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. 

ಸ್ಕೂಟರ್ ಸಹ ಸವಾರೆ ಅಕ್ಷತಾಳಿಗೆ ಚಿಕಿತ್ಸೆ ಮುಂದುವರಿದಿದ್ದು ಆಕೆ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್ಸಿನಡಿಗೆ ಸಿಲುಕಿದ ಸ್ಕೂಟರ್ ಸಂಪೂರ್ಣ ಅಪ್ಪಚ್ಚಿಗೊಂಡಿದೆ. ಘಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಸ್ತಬ್ದಗೊಂಡಿತು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article