ಕೆನರಾ ಬ್ಯಾಂಕ್‌ನ ಫರಂಗಿಪೇಟೆ ಶಾಖೆಯಲ್ಲಿ ಕಳವಿಗೆ ವಿಫಲ ಯತ್ನ
ಪರಂಗಿಪೇಟೆಯ ಮೆನೆಜಸ್ ಪ್ಲಾಜಾ ಕಾಂಪ್ಲೆಕ್ಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾನುವಾರ ಮಧ್ಯ ರಾತ್ರಿ ಮುಸುಕುಧಾರಿ ದುಷ್ಕರ್ಮಿ ಬ್ಯಾಂಕಿನ ಮೇಲ್ಬಾಗದಲ್ಲಿ ಕಟ್ಟರ್ ಬಳಸಿ ಒರ್ವನಿಗೆ ಒಳನುಗ್ಗಲು ಸಾಧ್ಯವಾಗುವಷ್ಟು ಮೇಲ್ಛಾವಣಿಯನ್ನು ಕೊರೆದು ಒಳಪ್ರವೇಶಿದ್ದರೂ, ಕಳ್ಳನಿಗೆ ಬ್ಯಾಂಕಿನ ಸ್ಟ್ರಾಂಗ್ ರೂಂ ಬ್ರೇಕ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗದೆ ನಗದಾಗಲಿ, ಚಿನ್ನಾಭರಣವಾಗಲಿ ಕಳವುಗೈಲು ಸಿಗದೆ ಬರಿಗೈಯಲ್ಲಿ ವಾಪಾಸ್ ಆಗಿದ್ದಾನೆ.
ಸೋಮವಾರ ಬೆಳಿಗ್ಗೆ ಬ್ಯಾಂಕ್ ಸಿಬ್ಬಂದಿ ಶಾಖೆ ತೆರೆದು ಬ್ಯಾಂಕಿನ ಒಳಕ್ಕೆ ಹೋದಾಗ ಮೇಲ್ಚಾವಣಿಯಲ್ಲಿ ರಂದ್ರ ಕಂಡುಬಂದಿದ್ದು, ಕಳವಿಗೆ ವಿಫಲಯತ್ನ ನಡೆದಿರುವ ಕೃತ್ಯ ಬೆಳಕಿಗೆ ಬಂದಿದೆ.
ತಕ್ಷಣ ಸಿಬ್ಬಂದಿ ಬ್ಯಾಂಕಿನ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕುಮಾರ್, ಬಂಟ್ವಾಳ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಸಹಿತ ಗ್ರಾಮಾಂತರ ಠಾಣೆಯ ಎಸ್‌ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರ ತಂಡ, ಸೋಕೋ ತಂಡಗಳು ಸ್ಥಳಕ್ಕೆ ಕರೆಸಲಾಗಿತ್ತು.
ಅವರು ಪರಿಶೀಲಿಸಿದ್ದು ಬ್ಯಾಂಕಿನಿಂದ ಯಾವುದೇ ಬೆಲೆಬಾಳುವ ವಸ್ತುಗಳಾಗಲೀ, ನಗದಾಗಲಿ ಕಳ್ಳತನ ವಾಗಿರುವುದಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.