ಅಕ್ರಮ ಬಾಂಗ್ಲಾ ದೇಶಿಗಳ ವಿರುದ್ಧ ತೀವ್ರ ಕಾರ್ಯಾಚರಣೆ: ಮತ್ತೆ ಮೂರು ಬಾಂಗ್ಲಾ ದೇಶಿಗಳು ಪತ್ತೆ, ಒಬ್ಬ ಪರಾರಿ

ಅಕ್ರಮ ಬಾಂಗ್ಲಾ ದೇಶಿಗಳ ವಿರುದ್ಧ ತೀವ್ರ ಕಾರ್ಯಾಚರಣೆ: ಮತ್ತೆ ಮೂರು ಬಾಂಗ್ಲಾ ದೇಶಿಗಳು ಪತ್ತೆ, ಒಬ್ಬ ಪರಾರಿ

ಮಂಗಳೂರು: ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗಳ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಸೋಗಿನಲ್ಲಿ ಅಡಗಿಕೊಂಡಿದ್ದ ಮೂರು ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಇವರು ಕಳೆದ ಎರಡು ತಿಂಗಳಿಂದ ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದು, ನಕಲಿ ದಾಖಲೆಗಳ ಸಹಾಯದಿಂದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು.

ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಆರೋಪಿಗಳು:

ಪೊಲೀಸರ ಮಾಹಿತಿ ಪ್ರಕಾರ, ನೂರ್ ಅಮೀನ್, ಮಹಮ್ಮದ್ ಕೌಸರ್, ಇಮ್ರಾನ್ ಅಲಿ ಎಂಬುವರನ್ನ ವಶಕ್ಕೆ ಪಡೆಯಲಾಗಿದೆ. ಇವರು ಬಾಂಗ್ಲಾದೇಶದ ರಾಜ್ಶಾಹಿ ಜಿಲ್ಲೆಯ ನಿವಾಸಿಗಳಾಗಿದ್ದು, ಪಶ್ಚಿಮ ಬಂಗಾಳ ಮಾರ್ಗವಾಗಿ ಅಕ್ರಮವಾಗಿ ಭಾರತ ಪ್ರವೇಶಿಸಿ ಬಳಿಕ ಮಂಗಳೂರಿಗೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಎರಡು ತಿಂಗಳಿಂದ ಮಂಗಳೂರಿನಲ್ಲಿ ನೆಲೆಸಿರುವ ವಿಚಾರ ಬೆಳಕಿಗೆ ಬಂದಿದೆ. ಉರ್ವ ಠಾಣೆ ಪೊಲೀಸರು ಕೋಡಿಕಲ್ ಪ್ರದೇಶದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ದಾಳಿ ನಡೆಸಿ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದು ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ವಶಕ್ಕೆ ಪಡೆದವರಲ್ಲಿ ಮೂವರು ಬಾಂಗ್ಲಾದೇಶಿ ಪ್ರಜೆಗಳಾಗಿರುವುದು ದೃಢವಾಗಿದೆ. ಉಳಿದವರ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಕಾರ್ಯಾಚರಣೆಯ ವೇಳೆ ಒಬ್ಬ ಶಂಕಿತ ಬಾಂಗ್ಲಾದೇಶಿ ಪರಾರಿಯಾಗಿದ್ದಾನೆ.

ಪೊಲೀಸರು ನಗರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ವಲಸೆ ಕಾರ್ಮಿಕರ ದಾಖಲೆ ಪರಿಶೀಲನೆ, ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ತಪಾಸಣೆ, ಉದ್ಯೋಗದಾತರ ಮಾಹಿತಿ ಸಂಗ್ರಹ, ಅಕ್ರಮ ದಾಖಲೆ ಜಾಲದ ತನಿಖೆ ಮುಂದುವರಿದಿದೆ. ಈಗಾಗಲೇ ಮುಕ್ಕದಲ್ಲಿ ಪತ್ತೆಯಾಗಿರುವ 8 ಮಂದಿ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಬಂಧನ ಕೇಂದ್ರದಲ್ಲಿಯೇ ಇರಿಸಲಾಗಿದೆ. ನಿರಂತರವಾಗಿ ವಿಚಾರಣೆ ಒಳಪಡಿಸಲಾಗುತ್ತಿದೆ.

ಕಾರ್ಯಾಚರಣೆಗೆ ಸೂಚನೆ..

ಮಂಗಳೂರು ಕಮಿಷನರೇಟ್‌ನ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳುವಂತೆ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನಿರ್ದೇಶನ ನೀಡಿದ್ದಾರೆ.

ಕಟ್ಟಡ, ರಸ್ತೆ ನಿರ್ಮಾಣ, ಕೈಗಾರಿಕೆ, ಮೀನುಗಾರಿಕೆ ಸಹಿತ ವಿವಿಧೆಡೆಗಳಲ್ಲಿ ದುಡಿಯುವ ಕಾರ್ಮಿಕ ವರ್ಗದಲ್ಲಿ ಬಾಂಗ್ಲಾ ಪ್ರಜೆಗಳು ಸೇರಿಕೊಂಡಿರುವ ಸಾಧ್ಯತೆ ಇರುವುದರಿಂದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ. ಜತೆಗೆ ಉದ್ಯಮಿಗಳು, ಗುತ್ತಿಗೆದಾರರು, ಮಾಲಕರು ಕೂಡಾ ತಮ್ಮಲ್ಲಿರುವ ಕಾರ್ಮಿಕರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಒಂದು ವೇಳೆ ಅಕ್ರಮ ಬಾಂಗ್ಲಾ ಪ್ರಜೆಗಳು ಇರುವುದು ಪತ್ತೆಯಾದಲ್ಲಿ ಆಯಾ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಮೌಖಿಕ ಸೂಚನೆ ನೀಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article